ಎನ್ಐಎ ತನಿಖೆ ನಡೆಸಲು ಒತ್ತಾಯ

home minister
Published on

ಬೀದರ್: ವಿಜಯದಶಮಿ ನಿಮಿತ್ತ ಇಲ್ಲಿನ ವಳಕೋಟೆ ಕಾಳಿಕಾ ಭವಾನಿ ದೇವಿ ಪಲ್ಲಕ್ಕಿ ಉತ್ಸವ ವೇಳೆ ನಡೆದ ಗಲಾಟೆ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಪಕ್ಷದ ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಾಳಕರ್, ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಮುಖಂಡ ವಿದ್ಯಾಸಾಗರ ಶಾಬಾದಿ ಅವರು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದ್ದಾರೆ. ವ್ಯವಸ್ಥಿತವಾಗಿ ಇಲ್ಲಿ ಗಲಭೆ ನಡೆಸಲು ಪ್ರಯತ್ನಿಸಲಾಗಿದೆ. ಇದರ ಹಿಂದಿನ ಜಾಡು ಪತ್ತೆ ಹೆಚ್ಚುವ ಜತೆಗೆ ಸಮಾಜಘಾತುಕ ಶಕ್ತಿಗಳಿಗೆ ಮಟ್ಟ ಹಾಕಲು ಎನ್ಐಎ ತನಿಖೆ ಅಗತ್ಯವಿದೆ ಎಂದು ಗಮನ ಸೆಳೆದಿದ್ದಾರೆ.
ದಸರಾ ಸಂದರ್ಭದಲ್ಲಿ ಪಲ್ಲಕ್ಕಿ ಮೆರವಣಿಗೆ ಹಾಗೂ ಗವಾನ ಮದರಸಾ ಪರಿಸರದಲ್ಲಿ ಪೂಜೆ ಮಾಡುವುದು ಸಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ಈ ಪರಂಪರೆ ಮುಂದುವರಿಸುವುದಕ್ಕೆ ಕೆಲವರು ಅಡ್ಡಿಪಡಿಸಿದ್ದಾರೆ. ಎಲ್ಲ ಪರವಾನಗಿ ಪಡೆದು ಪೂಜೆ ಸಲ್ಲಿಸಿ ಹೋದ ಬಳಿಕ ಅನವಶ್ಯಕವಾಗಿ ಕೆಲವರು ವಿವಾದ ಸೃಷ್ಟಿಸುವ ದುರುದ್ದೇಶದಿಂದ ಸಾವಿರಾರು ಜನರನ್ನು ರಸ್ತೆಗಿಳಿಯುವಂತೆ ಮಾಡಿದ್ದಾರೆ.  ಹಿಂದುಗಳ ಮನೆಗೆ ನುಗ್ಗಿ ಹೊಡಿತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಎನ್ಐಎನಿಂದ ತನಿಖೆ ನಡೆದರೆ ಎಲ್ಲ ಸತ್ಯಾಂಶ ಬೇಗ ಹೊರಬರಹುದಾಗಿದೆ. ಒಂದು ಸಮಾಜಕ್ಕೆ ಬಿಡಲ್ಲ ಎಂದು ಧಮ್ಕಿ ಹಾಕಿದ್ದು ಖಂಡನೀಯ. ಇಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಭವಾನಿ ಭಕ್ತರ ವಿರುದ್ಧ ದಾಖಲಿಸಿದ ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net