

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಕಿರಿಕೊಡ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ 7 ದಿನಗಳಿಂದ ಹಮ್ಮಿಕೊಂಡಿದ್ದ 2023-24ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಭಾನುವಾರ ಕೊನೆಗೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಸಿ.ವಿ.ಶಂಭುಲಿಂಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತ ಅನುಭವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕು ಎಂದು ಸಲಹೆ ನೀಡಿದರು.
ಘಟಕದ ಯೋಜನಾಧಿಕಾರಿ ಕೆ.ಎಚ್.ಯೋಗೇಂದ್ರ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನ ಸೇರಿದಂತೆ ಹತ್ತು ಹಲವು ವಿಷಯಗಳಿಗೆ ಪೂರಕವಾದ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಕಲಿತಿರುವ ವಿಷಯಗಳನ್ನು ತನ್ನ ಭವಿಷ್ಯಕ್ಕೂ ಮತ್ತು ಸಮಾಜದ ಒಳಿತಿಗಾಗಿಯೂ ಸದ್ಬಳಕೆ ಮಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ಅಬ್ದುಲ್ ರಬ್, ಪ.ಪೂ.ಕಾಲೇಜು ಉಪನ್ಯಾಸಕ ಶಶಿಕುಮಾರ್, ಪದವಿ ಕಾಲೇಜಿನ ಉಪನ್ಯಾಸಕರದ ರಮ್ಯಾ, ಕಾವ್ಯಾ ಯೋಗೇಂದ್ರ, ಭಾನುಮತಿ, ಶಿಬಿರಾರ್ಥಿಗಳು ಇದ್ದರು.