

ಹಾಸನ: ಯುವಕರು ರಾಷ್ಟ್ರೀಯ ಸ್ವಯಂ ಸೇವಾ ಶಿಬಿರದ ಮೂಲಕ ಗ್ರಾಮೀಣ ಭಾಗದ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ನಗರಸಭಾ ಸದಸ್ಯ ಚಂದ್ರೇಗೌಡ ಹೇಳಿದರು.
ತಾಲೂಕಿನ ಎಸ್. ತಿಮ್ಮನಹಳ್ಳ್ಳಿ ಗ್ರಾಮದಲ್ಲಿ ಮಂಗಳವಾರ ನಗರದ ಆರ್.ಸಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ (ಗಂಧದ ಕೋಠಿ) ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಯಂ ಸೇವಾ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ದೇಶ ಸೇವೆಯಲ್ಲಿ ತೊಡಗುವ ಮೂಲಕ ದೇಶಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕು. ಯುವಕರು ಒಂದು ವಾರದ ಕಾಲ ನಡೆಯುವ ರಾಷ್ಟ್ರೀಯ ಸ್ವಯಂ ಸೇವಾ ಶಿಬಿರದಲ್ಲಿ ಗ್ರಾಮವನ್ನು ಸ್ವಚ್ಛ ಮಾಡುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸಬೇಕು. ವಿದ್ಯಾಭ್ಯಾಸದೊಂದಿಗೆ ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುವ ಸಹಕಾರಿಯಾಗಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಜಿ.ಕವಿತಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಒಂದು ವಾರಗಳ ಕಾಲ ನಡೆಯುವ ಈ ಎನ್‌ಎಸ್‌ಎಸ್ ಶಿಬಿರವನ್ನು ಗ್ರಾಮೀಣ ಭಾಗದ ಜನರು ಸಹಕಾರದಿಂದ ಯಶಸ್ವಿಯಾಗಿ ನಡೆಸಬೇಕಾಗಿದೆ. ಯುವಕರು ವಿದ್ಯಾಭ್ಯಾಸದ ಅವಧಿಯಲ್ಲಿ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಯೊಬ್ಬ ಯುವತಿಯರು ಉನ್ನತ ಶಿಕ್ಷಣ ಪಡೆದುಕೊಳ್ಳುವ ಮೂಲಕ ಸಮಾಜದ ಉನ್ನತ ಸ್ಥಾನಗಳನ್ನು ಅಲಂಕರಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದರಿಂದ ತಮ್ಮಲ್ಲಿನ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಇಂದಿನ ಯುವಕರು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುತ್ತಿಲ್ಲ. ಇದರಿಂದ ಅವರು ಎಷ್ಟೇ ವಿದ್ಯಾವಂತರಾದರೂ ಪ್ರಯೋಜನವಿಲ್ಲ. ಮಾನವೀಯ ಮೌಲ್ಯಗಳು ಯುವಕರಿಗೆ ಅತ್ಯಂತ ಅವಶ್ಯಕವಾಗಿದೆ. ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯಂತಹ ಕಾರ್ಯಕ್ರಮಗಳಿಂದ ದೇಶದಲ್ಲಿ ಆಂತರಿಕ ಕಲಹಗಳನ್ನು ನಿಯಂತ್ರಿಸಬಹುದು. ವಿದ್ಯಾರ್ಥಿಗಳು ಜೀವನದಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕತೆಗಳನ್ನು ಬೆಳಸಿಕೊಂಡರೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬಹುದು ಎಂದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ನಿರ್ದೇಶಕ ಮಂಜುನಾಥ, ಶಿಬಿರಾಧಿಕಾರಿ ಡಾ.ಸಿ.ಎಲ್.ಶಿವಕುಮಾರ್, ಸಹ ಶಿಬಿರಾಧಿಕಾರಿಗಳಾದ ಪಿ. ನಂದನ್, ಜಿ. ಸುನೀತಾ, ಅಧ್ಯಾಪಕರಾದ ಡಾ.ಎಚ್.ಇ. ಸಾವಿತ್ರಿ, ನಿವೃತ್ತ ಎನ್‌ಎಸ್‌ಎಸ್ ಅಧಿಕಾರಿ ಸಿ.ಎಸ್.ಮೋಹನ್, ಉಪನ್ಯಾಸಕರಾದ ದೇವಿಕಾರಾಣಿ, ತಿಮ್ಮಶೆಟ್ಟಿ, ಸಂದೀಪ್, ಎಚ್.ಕೆ. ದಿಲೀಪ್‌ಕುಮಾರ್, ಪಿ. ರವಿಕುಮಾರ್ ಹಾಗೂ ಇತರರು ಹಾಜರಿದ್ದರು.