ಎನ್‌ಎಚ್‌ಎಂ ಒಳಗುತ್ತಿಗೆ ನೌಕರರಿಂದ ಡಿಎಚ್‌ಒ ಕಚೇರಿ ಮುಂದೆ ಪ್ರತಿಭಟನೆ

ಎನ್‌ಎಚ್‌ಎಂ ಒಳಗುತ್ತಿಗೆ ನೌಕರರಿಂದ ಡಿಎಚ್‌ಒ ಕಚೇರಿ ಮುಂದೆ ಪ್ರತಿಭಟನೆ
Published on

ಹಾಸನ : ಕಾಯಂ ನೇಮಕಾತಿಗೆ ಆಗ್ರಹಿಸಿ ಕಳೆದ ಒಂದು ತಿಂಗಳಿಂದ ಮುಷ್ಕರ ನಡೆಸುತ್ತಿರುವ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಒಳಗುತ್ತಿಗೆ ನೌಕರರಿಗೆ ಎರಡು ದಿನದೊಳಗೆ ಕೆಲಸಕ್ಕೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ. ಸಚಿವ ಸಂಪುಟ ಸಭೆ ಆಗುವವರೆಗೂ ನಮಗೆ ಕಾಲಾವಕಾಶ ನೀಡಬೇಕು. ನಮ್ಮ ಕೆಲಸ ಕಾಯಂ ಮಾಡಬೇಕು ಎಂದು ಆಗ್ರಹಿಸಿ ಒಳಗುತ್ತಿಗೆ ನೌಕರರು ಸೋಮವಾರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಎನ್‌ಎಚ್‌ಎಂ ಒಳಗುತ್ತಿಗೆ ನೌಕರರಾದ ನಾವು ಕಳೆದ ಹಲವಾರು ವರ್ಷಗಳಿಂದ ನಮ್ಮ ಸೇವೆಯನ್ನು ಕಾಯಂ ಮಾಡಬೇಕೆಂದು ಮನವಿ ಮಾಡಿಕೊಂಡು ಬಂದಿದ್ದೇವೆ. ಈ ಬಗ್ಗೆೆ ಇಲಾಖೆಯ ಮುಖ್ಯಸ್ಥರಾಗಲಿ, ಸರ್ಕಾರವಾಗಲಿ ನಮ್ಮ ಬೇಡಿಕೆ ಈಡೇರಿಸದ ಕಾರಣ ನಾವು ನಮ್ಮ ಸಂಘದ ವತಿಯಿಂದ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದರು.

ಒಂದು ದಿನದ ಹಿಂದೆ ನಮ್ಮ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶಿಕಾರಿಪುರದಲ್ಲಿ ಖುದ್ದಾಗಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ನಮ್ಮ ಬೇಡಿಕೆಯ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಒಂದು ವಾರದವರೆಗೆ ಕಾಲಾವಕಾಶ ಕೋರಿ, ಕರ್ತವ್ಯಕ್ಕೆ ಹಾಜರಾಗಬೇಕೆಂದು ತಿಳಿಸಿದ್ದರು. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಮುಷ್ಕರ ಮುಂದುವರಿಸುತ್ತೇವೆ. ನಮ್ಮ ಮುಷ್ಕರದಿಂದ ರಾಜ್ಯದಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ ನೀಡುವಲ್ಲಿ ತೊಂದರೆಯಾಗಿದ್ದರೆ ಈ ಮೂಲಕ ಕ್ಷಮೆ ಯಾಚಿಸುತ್ತೇವೆ ಎಂದರು.

ಈ ಮಧ್ಯೆ 48 ಗಂಟೆಗಳ ಕಾಲಾವಧಿ ಒಳಗೆ ಕೆಲಸಕ್ಕೆ ಹಾಜರಾಗಬೇಕು. ಇಲ್ಲದಿದ್ದಲ್ಲಿ ಆ ಜಾಗಕ್ಕೆ ಬೇರೆಯವರನ್ನು ಸೇರಿಸಿಕೊಳ್ಳುವುದಾಗಿ ಸರ್ಕಾರ ನಮಗೆಲ್ಲಾ ನೊಟೀಸ್ ನೀಡಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಚಿವ ಸಂಪುಟ ಸಭೆ ಆಗುವವರೆಗೂ ಪ್ರತಿಭಟನೆ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಎನ್‌ಎಚ್‌ಎಂ ಒಳಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಸ್. ಕುಮಾರ್, ರಾಘವೇಂದ್ರ, ಮಂಗಳಾ, ತಿಮ್ಮಯ್ಯ, ನವೀನ್, ಮೋನಿಕಾ, ಪೂಜಾ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net