

ಮೈಸೂರು: ಮುಂದಿನ ಎರಡು ದಶಕದಲ್ಲಿ ದೊಡ್ಡ ಇಂಜಿನ್‌ಗಳನ್ನು ಒಳಗೊಂಡ ಸಿವಿಲ್ ಏರ್‌ಕ್ರಾಫ್ಟ್‌ಗಳು ತಯಾರಾಗಲಿವೆ. ಬೆಂಗಳೂರಿನ ಎನ್‌ಎಎಲ್‌ನಲ್ಲಿ ಸದ್ಯ 90 ಸೀಟ್‌ನ ಸಾರಸ್ ಏರ್‌ಕ್ರಾಫ್ಟ್ ತಯಾರಾಗುತ್ತಿದ್ದು, ಇನ್ನು ಹೆಚ್ಚಿನ ಸಂಶೋಧನೆ ನಡೆಯಲಿದೆ ಎಂದು ಡಿಆರ್‌ಡಿಒ ಸಂಸ್ಥೆಯ ಏರೋನಾಟಿಕಲ್ ಸಿಸ್ಟಮ್ಸ್‌ನ ವಿಶ್ರಾಂತ ನಿರ್ದೇಶಕ ಹಾಗೂ ಅಗ್ನಿ ಮಿಷನ್‌ಗಳ ಯೋಜನಾ ನಿರ್ದೇಶಕ ಟೆಸ್ಸಿ ಥಾಮಸ್ ತಿಳಿಸಿದರು.
ಮಾನಸಗಂಗೋತ್ರಿ ಆವರಣದಲ್ಲಿರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ 61ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸಂಸ್ಥೆ ಸಂಸ್ಥಾಪಕ ಸರ್ದಾರ್ ಪಣಿಕ್ಕರ್ ಸ್ಮರಣಾರ್ಥ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಯುದ್ಧ ವಿಮಾನಗಳ ತಯಾರಿಗೆ ನೀಡಿದಷ್ಟು ಮಹತ್ವನ್ನು ಸಿವಿಲ್ ಏವಿಯೇಷನ್‌ಗೆ ನೀಡಲಾಗುತ್ತಿಲ್ಲ ಎನ್ನುವ ಅಪವಾದವಿದೆ. ಸದ್ಯಕ್ಕೆ ಬೆಂಗಳೂರಿನ ಎಚ್‌ಎಎಲ್‌ನಿಂದ 90 ಆಸನಗಳ ಸಾರಸ್ ಏರ್‌ಕ್ರಾಫ್ಟ್ ತಯಾರಾಗುತ್ತಿದ್ದು, ಮುಂದಿನ ಎರಡು ದಶಕದಲ್ಲಿ ದೊಡ್ಡ ಇಂಜಿನ್‌ಗಳನ್ನು ಒಳಗೊಂಡ ಸಿವಿಲ್ ಏರ್‌ಕ್ರಾಫ್ಟ್‌ಗಳು ಬರುತ್ತದೆ ಎಂದು ಹೇಳಿದರು.
ಯುದ್ಧ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಪೈಲಟ್ ಇಲ್ಲದೆ ಚಾಲನೆಗೊಳ್ಳುವ ಏರ್‌ಕ್ರಾಫ್ಟ್‌ಗಳನ್ನು ಡಿಆರ್‌ಡಿಒ ಸಿದ್ಧಪಡಿಸುತ್ತಿದೆ. ಈ ಮಾದರಿಯ ಕ್ರಾಫ್ಟ್‌ಗಳಿಂದ ಭವಿಷ್ಯದಲ್ಲಿ ಉಪಯುಕ್ತವಾಗಲಿವೆ. ಇದರೊಂದಿಗೆ ಸಿವಿಲ್ ಕ್ರಾಫ್ಟ್‌ಗಳ ನವೀನ ತಯಾರಿಕೆಗೂ ಒತ್ತು ನೀಡಲಾಗಿದೆ ಎಂದರು.
ನಮ್ಮಲ್ಲಿ ಇಂಜಿನ್ ತಯಾರಿಕೆಗೆ ಪೂರಕ ವಾತಾವರಣವಿದ್ದರೂ ಏರ್‌ಕ್ರಾಫ್ಟ್‌ಮೇಲ್ಮೈ ಹಾಗೂ ಇನ್ನಿತರ ಭಾಗಗಳನ್ನು ತಯಾರಿಸುವ ಲೋಹಗಳು ಲಭ್ಯವಿಲ್ಲ. ಈ ಸಮಸ್ಯೆ ದೂರಾದರೆ ಏರ್‌ಕ್ರಾಫ್ಟ್‌ನಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಸಹಕಾರಿ ಅಗುತ್ತದೆ ಎಂದು ಹೇಳಿದರು.
ಆಧುನಿಕ ಜಗತ್ತಿನಲ್ಲಿ ಸಂಶೋಧಕರಿಗೆ ಹೆಚ್ಚು ಅವಕಾಶವಿದ್ದು, ಅದಕ್ಕೆ ಪೂರಕವಾದ ವಾತಾವರಣವಿದೆ. ಡಿಆರ್‌ಡಿಒದಲ್ಲಿ ದೊರೆತ ಅನುಭವದಿಂದ ನನಗೆ ಹೊಸ ಸಂಶೋಧನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಶ್ರಮ ವಹಿಸಿ ಕೆಲಸ ಮಾಡಿದರೆ ಮೇಲೆ ಬರಲು ಸಾಧ್ಯವಿದೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಕಲಿಕೆ ಆಲೋಚನೆಗಳನ್ನು ಹುಟ್ಟು ಹಾಕುತ್ತದೆ. ಆಲೋಚನೆ ಆಸಕ್ತಿಯನ್ನು ಉಂಟು ಮಾಡುತ್ತದೆ. ಆಸಕ್ತಿಯು ಜ್ಞಾನವನ್ನು ತಂದುಕೊಡುತ್ತದೆ. ಜ್ಞಾನವು ವ್ಯಕ್ತಿಯನ್ನು ದೊಡ್ಡ ಜ್ಞಾನವಂತನಾಗಿ ಮಾಡುತ್ತದೆ ಎಂಬ ಕಲಾಂ ಅವರ ಮಾತುಗಳು ನಮಗೆ ಸದಾ ಪ್ರೇರಣೆಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಡಿಆರ್‌ಡಿಒ ಸಂಸ್ಥೆಯು ಸಂಸ್ಥಾಪನಾ ದಿನ ತನ್ನ ಸಂಶೋಧನೆಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡುತ್ತದೆ. ಆ ಸಂದರ್ಭದಲ್ಲಿ ಭೇಟಿ ನೀಡಿ ಅಲ್ಲಿರುವ ಜ್ಞಾನ, ಸಂಶೋಧನೆಯನ್ನು ಗಮನಿಸಬಹುದು. ಸಂಸ್ಥೆಯ ಜತೆಗೂಡಿ ನಾನಾ ಸಂಶೋಧನಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದರು.
ದೊಡ್ಡ ಯೋಜನೆಗಳನ್ನು ಮಾಡಲು ಮುಂದುವರಿದ ದೇಶಗಳಂತೆ ನಮ್ಮಲ್ಲಿ ಆರ್ಥಿಕ ಬಲ ಹಾಗೂ ಮೂಲ ಸೌಕರ್ಯಗಳಿಲ್ಲ. ಆದರೆ ದಿನ ಕ್ರಮೇಣ ಸಂಶೋಧನೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಲಿದೆ. ಎನ್‌ಇಪಿ ಈಗಿನ ಶಿಕ್ಷಣ ವ್ಯವಸ್ಥೆಯನ್ನೇ ಪುನರ್ ವ್ಯಾಖ್ಯಾನಿಸುತ್ತದೆ. ಶ್ರಮ ವಹಿಸಿ ಅಧ್ಯಯನ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ಪಡೆಯಲು ಇದರಿಂದ ಯಾವುದೇ ಅಡೆ ತಡೆಗಳಿಲ್ಲ ಎಂದರು.
ಚಿತ್ರನಟಿ ಮಾಳವಿಕ ಅವಿನಾಶ್, ಪ್ರಾಂಶುಪಾಲ ಪ್ರೊ.ವೈ.ಶ್ರೀಕಾಂತ್ ಇತರರು ಇದ್ದರು.