

ಚಿತ್ರದುರ್ಗ: ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್‌ನ 2024-25ನೇ ಸಾಲಿನ ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ವಿದ್ಯಾರ್ಥಿ ವೇತನ ಪರೀಕ್ಷೆ ಭಾನುವಾರ ಜಿಲ್ಲೆಯ 6 ಕೇಂದ್ರಗಳಲ್ಲಿ ನಡೆಯಿತು.
ಪರೀಕ್ಷೆಗೆ ನೋಂದಾಯಿಸಿದ್ದ 5938 ವಿದ್ಯಾರ್ಥಿಗಳ ಪೈಕಿ 1280 ಮಂದಿ ಗೈರಾಗಿದ್ದರು. ಬೆಳಗ್ಗೆ 10.30 ರಿಂದ 12ರವರೆಗೆ ನಡೆದ ಮಾನಸಿಕ ಸಾಮರ್ಥ್ಯ ಪರೀಕ್ಷೆಗೆ 5305, ಮಧ್ಯಾಹ್ನ 2ರಿಂದ 3.30 ರವರೆಗೆ ಜರುಗಿದ ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆಗೆ 5291ವಿದ್ಯಾರ್ಥಿಗಳು ಹಾಜರಾಗಿದ್ದರು.
ಚಿತ್ರದುರ್ಗದ 4 ಕೇಂದ್ರಗಳು, ಚಳ್ಳಕೆರೆ-4, ಹಿರಿಯೂರು 3, ಹೊಳಲ್ಕೆರೆ 2, ಹೊಸದುರ್ಗ 4 ಹಾಗೂ ಮೊಳಕಾಲ್ಮೂರಿನ 2 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿತ್ತು. ಆಯ್ಕೆಯಾದ ವಿದ್ಯಾರ್ಥಿಗಳಿಗೆ 9ರಿಂದ 12ನೇ ತರಗತಿವರೆಗೆ ಪ್ರತಿ ತಿಂಗಳು 1000 ರೂ. ವಿದ್ಯಾರ್ಥಿ ವೇತನ ದೊರೆಯಲಿದೆ.
ಚಳ್ಳಕೆರೆಯಲ್ಲಿ ಪರೀಕ್ಷೆ ಸುಗಮ
ಚಳ್ಳಕೆರೆ: ನಗರದಲ್ಲಿ ಭಾನುವಾರ ನಡೆದ ಎನ್‌ಎಂಎಂಎಸ್ ಪರೀಕ್ಷೆ ಸುಗಮವಾಗಿ ನಡೆಯಿತು ಎಂದು ಬಿಇಒ ಕೆ.ಎಸ್.ಸುರೇಶ್ ಹೇಳಿದರು.
ಪಟ್ಟಣದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆ, ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಪಾವಗಡ ರಸ್ತೆಯ ಆದರ್ಶ ವಿದ್ಯಾಲಯ, ಶ್ರೀವಾಸವಿ ವಿದ್ಯಾಲಯದಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು ಎಂದು ತಿಳಿಸಿದರು.
ಪ್ರಸಕ್ತ 2024-25ನೇ ಸಾಲಿನ ಎನ್‌ಎಂಎಂಎಸ್ ಪರೀಕ್ಷೆಗೆ ತಾಲೂಕಿನಿಂದ 1147ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. 1025 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು ಎಂದು ತಿಳಿಸಿದರು.