

ಮೈಸೂರು: ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಜಾರಿಯಾದ ಬಳಿಕ ಸಿಬಿಎಸ್‌ಸಿ ಪಠ್ಯಕ್ರಮ ಆಧಾರಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಳವಾಗಿದೆ ಎಂದು ಸಿದ್ಧಾರ್ಥನಗರದ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲೆ ನೂತನ್ ಪೂಂಜ್ ಹೇಳಿದರು.
ಎನ್‌ಇಪಿ ಅನುಷ್ಠಾನದ ಪರಿಣಾಮ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಕೊಳ್ಳುವ ವಯಸ್ಸನ್ನು 6 ವರ್ಷ ಮೇಲ್ಪಟ್ಟವರಿಗೆ ನಿಗದಿಪಡಿಸಲಾಗಿದೆ. ಇದು ದಾಖಲಾತಿ ಹೆಚ್ಚಾಗಲು ಸಹಕಾರಿ ಆಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೂತನ ಶಿಕ್ಷಣ ನೀತಿ ಮಕ್ಕಳಲ್ಲಿ ಕೌಶಲತೆ ಬೆಳೆಸಲು ಅನುಕೂಲವಾಗಿದೆ. ಮಕ್ಕಳಿಗೆ ಅಗತ್ಯವಿರುವ ಕೌಶಲವನ್ನು ವೃದ್ಧಿಸುವಲ್ಲಿ ಈ ನೀತಿ ಪೂರಕವಾಗಿದೆ. ವಿದ್ಯಾರ್ಥಿಗಳಲ್ಲಿ ಜ್ಞಾನ ಹೆಚ್ಚಿಸಲು, ವೈಯಕ್ತಿಕ ಸಾಮರ್ಥ್ಯ ಹೊರಹೊಮ್ಮಲು ಸಹ ನೆರವಾಗಲಿದೆ. ಸ್ಥಳೀಯ ವಿದ್ಯಾರ್ಥಿಗಳ ಜ್ಞಾನಮಟ್ಟವನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಲಿದೆ ಎಂದರು.
ನಮ್ಮ ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಲಾಗಿದೆ. ಇಲ್ಲಿ 20 ಸ್ಮಾರ್ಟ್ ಕ್ಲಾಸ್, 10 ಟ್ಯಾಬ್ಲೆಟ್ಸ್, 20 ಮಲ್ಟಿಮೀಡಿಯಾ ಪ್ರೊಜೆಕ್ಟ್‌ಗಳು, ಒಂದು ಅಟಲ್ ಥಿಂಕರಿಂಗ್ ಲ್ಯಾಬ್ ಇದೆ. ಪಿಎಂ ಇ-ವಿದ್ಯಾ ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ. 12 ಸ್ವಯಂಪ್ರಭಾ ಟಿವಿ ಚಾನಲ್ ಕೂಡ ಹೊಂದಿದೆ ಎಂದರು.
ನವೋದಯ ಶಾಲೆಯ ಪ್ರಾಂಶುಪಾಲ ಜೆ.ಮಧುಸೂದನ್ ಮಾತನಾಡಿ, ನೂತನ ಶಿಕ್ಷಣ ನೀತಿಯು ಮಕ್ಕಳಲ್ಲಿ ಜಾಗತಿಕ ಮಟ್ಟದ ಜ್ಞಾನವನ್ನು ವೃದ್ಧಿಸುತ್ತದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗೂ ಹೆಚ್ಚಿನ ಒತ್ತು ನೀಡುತ್ತದೆ. ವಿದ್ಯಾರ್ಥಿಗಳು ತಮಗೆ ಇಷ್ಟವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರೃ ನೀಡುತ್ತದೆ ಎಂದರು.