

ಚಿತ್ರದುರ್ಗ: ರಾಷ್ಟ್ರೀಯ ಶಿಕ್ಷಣ ನೀತಿ 2023 ಶೈಕ್ಷಣಿಕ ವರ್ಷದಿಂದಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಎನ್‌ಇಪಿ ದೇಶದ ಪ್ರಾದೇಶಿಕ ಭಾಷೆಗಳ ಮೇಲೆ ಸವಾರಿ ಮಾಡುವ ಅಂಶಗಳನ್ನು ಒಳಗೊಂಡಿದೆ. ಹೀಗಾಗಿ ರದ್ದತಿಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.
ನೀತಿಯು ಒಕ್ಕೂಟ ರಾಜ್ಯಗಳ ಭಾವನೆಗಳಿಗೆ ಧಕ್ಕೆ ತರಬಾರದು. ಆದರೆ, ಇತ್ತೀಚಿನ ಕೇಂದ್ರದ ಧೋರಣೆ ಇದಕ್ಕೆ ವಿರುದ್ಧವಾಗಿದೆ. ಉತ್ತರ ಭಾರತವನ್ನೇ ಕೇಂದ್ರಿಕರಿಸಿಕೊಂಡು ರಚಿಸಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ದಕ್ಷಿಣ ರಾಜ್ಯಗಳ ಭಾಷೆ, ಸಂಸ್ಕೃತಿ, ಇತಿಹಾಸವನ್ನು ಕಡೆಗಣಿಸಿ, ಹಿಂದಿಯನ್ನು ಬಲವಂತವಾಗಿ ಹೇರಿಕೆ ಮಾಡುವ ಉದ್ದೇಶವಾಗಿದೆ. ಆಯಾ ರಾಜ್ಯಗಳಿಗೆ ಯಾವುದೇ ಸ್ವತಂತ್ರ ಅಧಿಕಾರ ಎನ್‌ಇಪಿ ಕಲ್ಪಿಸಿಲ್ಲ. ಹೀಗಾಗಿ ಯಾವ ಕಾರಣಕ್ಕೂ ರಾಜ್ಯ ಸರ್ಕಾರ ಒಪ್ಪಬಾರದು ಎಂದು ಆಗ್ರಹಿಸಿದರು.
ಶಿಕ್ಷಣ ಈಗಾಗಲೇ ಸಮವರ್ತಿ ಪಟ್ಟಿಯಲ್ಲಿರುವ ಕಾರಣ ರಾಜ್ಯ ಪಟ್ಟಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಆಯಾ ನಾಡಿನಲ್ಲೇ ಶೈಕ್ಷಣಿಕ ಸ್ವಾಯತ್ತತೆ ಸಿಕ್ಕಾಗ ಮಾತ್ರ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಸಾಧ್ಯ. ಸ್ಥಳೀಯ ಇತಿಹಾಸ, ಸಂಸ್ಕೃತಿ ಬಿಂಬಿಸುವ ಪಠ್ಯಗಳ ರಚನೆಗೂ ಸಹಕಾರಿಯಾಗಲಿದೆ. ಅಲ್ಲದೆ, ಪ್ರತ್ಯೇಕ ಹೊಸ ನೀತಿ ರೂಪಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡಬೇಕು ಎಂದು ಕೋರಿದರು.
ಸೇನೆಯ ಅಧ್ಯಕ್ಷ ತಿಪ್ಪೇಸ್ವಾಮಿ, ಪದಾಧಿಕಾರಿಗಳಾದ ಶಿವಣ್ಣ, ಶಿವರಾಜ್, ಅನಿಲ್, ಚೌಡೇಶ್, ಎಂ.ಡಿ.ಷರೀಫ್, ರಾಮು, ಮಂಜುನಾಥ್ ಇತರರಿದ್ದರು.