

ಚಿತ್ರದುರ್ಗ: ರಾಜ್ಯದಲ್ಲೂ ಎನ್‌ಇಪಿ ಜಾರಿಯಾಗಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ನಗರದಲ್ಲಿ ಬುಧವಾರ ಸಹಿ ಸಂಗ್ರಹ ಅಭಿಯಾನ ಆರಂಭವಾಯಿತು.
ವಿದ್ಯಾರ್ಥಿಗಳಲ್ಲಿ ಅಡಗಿರುವ ಕೌಶಲ ಹೊರಗೆ ತರಲು ಶಿಕ್ಷಕರು ಮಾರ್ಗದರ್ಶಕರಾಗಿ ಇರಲು, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು, ಯುವಸಮೂಹ ಸವಾಲುಗಳನ್ನು ಎದುರಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿಯಾಗಿದೆ. ಆದರೆ, ವಿರೋಧವೇಕೆ ಎಂದು ಸಹಿ ಸಂಗ್ರಹಿಸಲಾಯಿತು.
ಭಾರತದ ವೈವಿಧ್ಯತೆ ರಕ್ಷಿಸಲು ಯಾರೆಲ್ಲ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆಯೋ ಅಂತಹ ರಾಜರು, ಮಹನೀಯರ ಆದರ್ಶ ಪಠ್ಯ ಕ್ರಮಗಳಲ್ಲಿ ಅಳವಡಿಸಬೇಕು. ಸಂಸ್ಕೃತಿ, ಕಲೆ, ಸಾಹಿತ್ಯವನ್ನು ಎಲ್ಲರೂ ತಿಳಿಯಬೇಕು. ಅದನ್ನು ಒಳಗೊಳ್ಳಲಿರುವ ಎನ್‌ಇಪಿ ರದ್ದುಗೊಳಿಸುತ್ತೇವೆ ಎಂಬ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ. ಹೀಗಾಗಿ ಅಭಿಯಾನ ನಡೆಸಲಾಗುತ್ತಿದೆ ಎಂದು ಎಬಿವಿಪಿ ಪದಾಧಿಕಾರಿಗಳು ತಿಳಿಸಿದರು.
ಎಬಿವಿಪಿ, ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ವಿದ್ಯಾಭಾರತಿ, ಭಾರತೀಯ ಶಿಕ್ಷಣ ಮಂಡಲ, ಸಂಸ್ಕೃತ ಭಾರತೀ, ಗುರುಕುಲ ಜನಸೇವಾ ವಿದ್ಯಾಕೇಂದ್ರ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್‌ನಿಂದ ಸಹಿ ಸಂಗ್ರಹಕ್ಕೆ ಚಾಲನೆ ದೊರೆತಿದೆ.
ಎಬಿವಿಪಿ ಪದಾಧಿಕಾರಿಗಳಾದ ಗೋಪಿ, ಚೈತ್ರಾ, ಮನೋಜ್, ಚಂದನಾ, ಕಾಟಲಿಂಗ, ಅಜ್ಜಯ್ಯ, ಸುಮನ್ ಇತರರಿದ್ದರು.