ಎನ್ ಸಿಪಿ ಕಡೆಗೆ ಮುಳೆ ನಡೆ ?

M G MULLE
Published on

ಮಾರ್ಥಂಡ ಜೋಶಿ ಬಸವಕಲ್ಯಾಣ

ಶಾಸಕ ಬಿ. ನಾರಾಯಣರಾವ್ ಅಗಲಿಕೆಯಂದಾಗಿ ಕ್ಷೇತ್ರದಲ್ಲಿ ಶೀಘ್ರ ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿವೆ. ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಟಿಕೆಟ್ಗಾಗಿ ಪ್ರಬಲ ಅಭ್ಯರ್ಥಿ ಮಧ್ಯೆ ತೀವ್ರ ಪೈಪೋಟಿ ನಡೆಯುತ್ತಿದೆ. ಆದರೆ ಜೆಡಿ ಎಸ್ ನಲ್ಲಿ ಇನ್ನೂ ಉತ್ಸಾಹ ಕಂಡುಬರುತ್ತಿಲ್ಲ.

ಚುನಾವಣೆಯಲ್ಲಿ ಜೆಡಿ ಎಸ್ ನಿಂದ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಜೆಡಿ ಎಸ್ ನಲ್ಲಿ ಇರುವ ಮರಾಠಾ ಸಮಾಜದ ಹಿರಿಯ ಮುಖಂಡ,ಮಾಜಿ ಶಾಸಕ ಎಂ.ಜಿ.ಮುಳೆ ಅವರ ನಡೆ ಗಮನ ಸೆಳೆದಿದೆ. ಇವರು ಮತ್ತೆ ಕಾಂಗ್ರೆಸ್ ಸೇರಬಹುದು ಎಂಬ ಚರ್ಚೆ ನಡೆದಿದ್ದವು. ಆದರೆ ಅಲ್ಲಿ ಟಿಕೆಟ್ ಸಿಗದ ಸುಳಿವು ಸಿಕ್ಕ ಬೆನ್ನಲ್ಲೇ ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ) ಕಡೆಗೆ ಮುಖ ಮಾಡಿದ್ದಾರೆಂಬ ಮಾತು ಕೇಳಿಬರುತ್ತಿವೆ. ಇದು ಸ್ಥಳೀಯ ರಾಜಕೀಯ ವಲಯದಲ್ಲಿ ಚರ್ಚೆಗೆ ಎಡೆಮಾಡಿದೆ.

ಮುಳೆ ಅವರು ಎನ್ ಸಿಪಿ ಮೂಲಕ ಉಪ ಸಮರದ ಅಖಾಡಕ್ಕಿಳಿಯಲಿದ್ದಾರೆ ಎಂಬ ಮಾತು ಅವರ ಆಪ್ತ ವಲಯದಿಂದಲೇ ಕೇಳಿ ಬರುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಇತ್ತೀಚೆಗೆ ಹೊಸದಿಲ್ಲಿಯಲ್ಲಿ ಎನ್ ಸಿಪಿ ನಾಯಕ, ಕೇಂದ್ರ ಮಾಜಿ ಸಚಿವ ಶರದ್ ಪವಾರ್ ಅವರನ್ನು ಮುಳೆ ಅವರು ಭೇಟಿ ಮಾಡಿ ಬಂದಿರುವುದು ಈ ಚರ್ಚೆಗೆ ಪುಷ್ಠಿ ನೀಡಿದೆ. ಬಸವಕಲ್ಯಾಣದಲ್ಲಿ ಎನ್ ಸಿಪಿ ನೆಲೆ ಇಲ್ಲ. ಆದರೆ ಮರಾಠಾ ಸಮಾಜ ಅಭ್ಯರ್ಥಿ ಹಾಗೂ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವಂಥ ಮರಾಠಾ ಮತದಾರರ ಹಿನ್ನೆಲೆಯಲ್ಲಿ ಇದು ಮಹತ್ವದ ಸಂಗತಿ ಎನಿಸಿದೆ.

ಮಹಾರಾಷ್ಟ್ರದಲ್ಲಿ ಶಿವಸೇನಾ, ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿ ಸರ್ಕಾರವಿದೆ. ಅಲ್ಲಿ ಆಡಳಿತ ಪಕ್ಷದಲ್ಲಿರುವ ಎನ್ ಸಿಪಿಯು ಇಲ್ಲಿ ತನ್ನ ಅಭ್ಯರ್ಥಿ ಕಣಕ್ಕಿಳಿಸುವುದೇ ಎಂಬುದು ಸಹ ಖಚಿತವಾಗಿಲ್ಲ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿ ಇರಬಹುದು. ಆದರೆ ಕರ್ನಾಟಕದಲ್ಲಿ ಇಲ್ಲ. ಹೀಗಾಗಿ ಇಲ್ಲಿ ಅಭ್ಯರ್ಥಿ ಕಣಕ್ಕಿಳಿಸಿದರೆ ಮುಂದೆ ಯಾವ ಬೆಳವಣಿಗೆ ಆಗಬಹುದು ಎಂಬ ಚರ್ಚೆಗಳು ನಡೆದಿವೆ. ಮುಳೆ ಅವರು ಸ್ಪರ್ಧೆ ಖಚಿತ ಎಂದು ಕಳೆದ ನವೆಂಬರ್ ಕೊನೆಯಲ್ಲಿ ಸಮಾನ ಮನಸ್ಕರ ಸಭೆ ನಡೆಸಿ ತಿಳಿಸಿದ್ದಾರೆ. ಆದರೆ ಪಕ್ಷ ಯಾವುದು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಆಡಳಿತ, ಪ್ರತಿಪಕ್ಷಕ್ಕೆ ಪ್ರತಿಷ್ಠೆ
ಆಡಳಿತ ಪಕ್ಷ ಬಿಜೆಪಿಗೆ ಉಪ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಮತ್ತೆ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಕಾಂಗ್ರೆಸ್‌ಗೆ ಸವಾಲಾಗಿದೆ. ಈಗಾಗಲೇ ಎರಡೂ ಪಕ್ಷದ ಅಧ್ಯಕ್ಷರು ಕ್ಷೇತ್ರಕ್ಕೆ ಭೇಟಿ ನೀಡಿ, ಕಾರ್ಯಕರ್ತರಲ್ಲಿ ಜೋಶ್ ತುಂಬಿದ್ದಾರೆ. ಆದರೆ ಜನತಾ ಪರಿವಾರಕ್ಕೆ ಭದ್ರ ನೆಲೆ ಕಲ್ಪಿಸಿದ ಈ ಕ್ಷೇತ್ರದಲ್ಲಿ ಜೆಡಿಎಸ್ ಮಾತ್ರ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಬಗ್ಗೆ ಇನ್ನೂ ಸ್ಪಷ್ಟತೆ ಕಂಡುಬಂದಿಲ್ಲ. ಪಕ್ಷದ ಅಭ್ಯರ್ಥಿ ಕಣಕ್ಕಿಳಿಸುವುದು ವ್ಯರ್ಥ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆ ಜೆಡಿಎಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ.

ಜನತಾ ಪರಿವಾರಕ್ಕೆ ನೆಲೆ ಕಲ್ಪಿಸಿದ ನೆಲ
ಕಳೆದ ನಾಲ್ಕು ದಶಕದಲ್ಲಿ ಎರಡು ಸಲ ಹೊರತುಪಡಿಸಿದರೆ ಉಳಿದೆಲ್ಲ ಚುನಾವಣೆಗಳಲ್ಲಿ ಜನತಾ ಪರಿವಾರ ಅಭ್ಯರ್ಥಿಗಳೇ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಹೀಗಾಗಿ ಜನತಾ ಪರಿವಾರದ ಭದ್ರಕೋಟೆ ಎಂದೇ ಕ್ಷೇತ್ರ ಗುರುತಿಸಿಕೊಂಡಿದೆ. ಬರುವ ಉಪ ಚುನಾವಣೆಗೆ ಜನತಾ ದಳ ಅಭ್ಯರ್ಥಿ ನಿಲ್ಲಿಸುವ ಬಗ್ಗೆ ಇನ್ನೂ ಪಕ್ಷ ತೀರ್ಮಾನಿಸದಿರುವುದು ಸಾಕಷ್ಟು ಗೊಂದಲ ಮೂಡಿಸಿದೆ. 1983ರಲ್ಲಿ ಜನತಾ ಪಕ್ಷದಿಂದ ಗೆದ್ದಿದ್ದ ಬಸವರಾಜ ಪಾಟೀಲ್ ಅಟ್ಟೂರ್ ಅವರು ನಿರಂತರ ನಾಲ್ಕು ಸಲ ಕ್ಷೇತ್ರ ಪ್ರತಿನಿಧಿಸಿದ್ದು ಜನತಾ ಪರಿವಾರದಿಂದಲೇ. ಹಿಂದೆ ಮೂರು ಸಲ ಕಾಂಗ್ರೆಸ್ ನಿಂದ ಪರಾಭವಗೊಂಡ ನಂತರ 1999ರಲ್ಲಿ ಎಂ.ಜಿ. ಮುಳೆ ಅವರು ಆಯ್ಕೆಯಾಗಿದ್ದು ಜೆಡಿ ಎಸ್ ನಿಂದ. 2004 ಮತ್ತು 2013ರಲ್ಲಿ ಮಲ್ಲಿಕಾರ್ಜುನ ಖೂಬಾ ಜೆಡಿ ಎಸ್ ನಿಂದ ಶಾಸಕರಾಗಿದ್ದರು. 2008ರಲ್ಲಿ ಬಿಜೆಪಿಯಿಂದ ಅಟ್ಟೂರ್ ಆಯ್ಕೆಯಾಗಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿ. ನಾರಾಯಣರಾವ್ ಗೆದ್ದಿದ್ದರು.

ಎನ್ ಸಿಪಿ ನಾಯಕ, ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರನ್ನು ಭೇಟಿ ಮಾಡಿರುವುದು ನಿಜ. ಆದರೆ ಇದು ಸೌಜನ್ಯಯುತ ಭೇಟಿಯಷ್ಟೇ. ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸಬೇಕು ಎನ್ನುವುದು ಬೆಂಬಲಿಗರ, ಹಿತೈಷಿಗಳ ಒತ್ತಾಸೆ. ಸದ್ಯ ನಾನು ಜೆಡಿ ಎಸ್ ನಲ್ಲಿ ಇದ್ದೇನೆ. ಬೆಂಬಲಿಗರ ಆಶಯಕ್ಕೆ ಪೂರಕವಾಗಿ ನಿರ್ಧಾರ ತೆಗೆದುಕೊಳ್ಳುವೆ.| ಎಂ.ಜಿ.ಮುಳೆ, ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net