

ಬಸವಕಲ್ಯಾಣ: ಮರಾಠಾ ಸಮಾಜದ ಪ್ರಭಾವಿ ನಾಯಕ, ಮಾಜಿ ಶಾಸಕ ಎಂ.ಜಿ.ಮುಳೆ ಅವರು ರಾಷ್ಟ್ರೀವಾದಿ ಕಾಂಗ್ರೆಸ್ ಪಕ್ಷ (ಎನ್.ಸಿ.ಪಿ)ದಿಂದ ನಾಮಪತ್ರ ಸಲ್ಲಿಸುವ ಮೂಲಕ ವಿಧಾನಸಭೆ ಉಪ ಸಮರಕ್ಕೆ ರಂಗೇರಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ತಿಲಕ್ ನಂಬಿಯಾರ್, ಪ್ರಧಾನ ಕಾರ್ಯದರ್ಶಿ ಪ್ರಕಾಶ ಮೋರೆ, ಜಿಲ್ಲಾಧ್ಯಕ್ಷ ರಾಮ ಭಾವು ಜಾಧವ್, ಬ್ರಹ್ಮಾನಂದ ರೆಡ್ಡಿ ಅವರೊಂದಿಗೆ ಮಂಗಳವಾರ ಮಿನಿ ವಿಧಾನಸೌಧಕ್ಕೆ ತೆರಳಿದ ಮುಳೆ, ಚುನಾವಣಾಧಿಕಾರಿ ಭುವನೇಶ ಪಾಟಿಲ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
2018ರ ಚುನಾವಣೆ ವೇಳೆ ಬಿಜೆಪಿಯಿಂದ ಟಿಕೆಟ್ ಸಿಗದ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಮುಳೆ ಜೆಡಿಎಸ್ ಸೇರಿದ್ದರು. ಕೊನೇ ಘಳಿಗೆ ಬದಲಾದ ರಾಜಕೀಯದಲ್ಲಿ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಇಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದರು. ಚುನಾವಣೆ ಕಣದಿಂದ ದೂರ ಉಳಿದರೂ ತಮ್ಮ ಸಮಾಜದವರಾದ ಸಿಂಧ್ಯಾ ಅವರಿಗೆ ಬೆಂಬಲಿಸಿ ಜೆಡಿಎಸ್ ನಲ್ಲೇ ಕೆಲಸ ಮಾಡಿದರು. ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಘೋಷಣೆ ವೇಳೆ ಗಣನೆಗೆ ತೆಗೆದುಕೊಳ್ಳದ ಕಾರಣ ಎನ್.ಸಿ.ಪಿ ಕಡೆ ಮಖ ಮಾಡಿದ್ದರು. ಎನ್.ಸಿ.ಪಿ ವರಿಷ್ಠ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ನಾಮಪತ್ರ ಸಲ್ಲಿಕೆಗೆ ಒಂದು ದಿನ ಮುನ್ನವೇ ಎನ್.ಸಿ.ಪಿ ಸೇರಿ ಈಗ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಕ್ಷೇತ್ರದಲ್ಲಿ ಮರಾಠಾ ಸಮಾಜ ಮತದಾರರ ಪ್ರಭಾವ ಹೆಚ್ಚಿದೆ. ಮುಳೆ ಅವರು ಮಾತ್ರ ಚುನಾವಣೆ ಕಣದಲ್ಲಿ ಮರಾಠಾ ಸಮಾಜದ ಅಭ್ಯರ್ಥಿ. ತಮ್ಮ ಸಮಾಜದ ಬೆಂಬಲ ಜತೆಯಲ್ಲಿ ಇತರೆ ಸಮುದಾಯದ ಒಂದಿಷ್ಟು ಸಾಥ್ ಸಿಕ್ಕರೆ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರದಲ್ಲಿ ಕದನಕ್ಕೆ ಇಳಿದಿದ್ದಾರೆ. ಇವರ ಸ್ಪರ್ಧೆ ಕಾಂಗ್ರೆಸ್ ಗಿಂತ ಬಿಜೆಪಿಗೆ ಹೆಚ್ಚಿನ ನಷ್ಟವನ್ನು ತರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.