

ರಾಜೇಂದ್ರ ಶಿಂಗನಮನೆ ಶಿರಸಿ
ಮಾರ್ಚ್ ತಿಂಗಳ ಸುಡು ಬಿಸಿಲಿನಿಂದಾಗಿ ಅರಣ್ಯ ಪ್ರದೇಶದಲ್ಲಿದ್ದ ಕೃತಕ ನೀರಿನ ಕೊಳಗಳು ಬತ್ತಿವೆ. ಇದರೊಂದಿಗೆ ವನ್ಯ ಸಂಕುಲಕ್ಕೆ ಸಂಕಷ್ಟ ಎದುರಾಗಿದೆ.
ಬೇಸಿಗೆಯ ಬೇಗೆಗೆ ಎಲ್ಲೆಡೆ ನೀರಿನ ತುಟಾಗ್ರತೆ ಎದುರಾಗುತ್ತಿದೆ. ವನ್ಯ ಜೀವಿಗಳಿಗೆ ಕುಡಿಯುವ ನೀರು ಲಭ್ಯವಾಗುವ ಜತೆ ಮಳೆ ನೀರಿಂಗಿಸುವ ಸಲುವಾಗಿ ರಚಿಸಿದ್ದ ಕಣಿವೆ ಕೆರೆಗಳ ಮಾದರಿಯ ಕೆರೆ, ಹೊಂಡಗಳು ಆರುತ್ತಿವೆ. ಹೀಗಾಗಿ, ವನ್ಯಜೀವಿಗಳು ಕುಡಿಯುವ ನೀರಿಗಾಗಿ ತಮ್ಮ ವಾಸಸ್ಥಳದ ಸಮೀಪದ ನೀರಾವರಿ ಜಮೀನುಗಳತ್ತ ಮುಖ ಮಾಡುತ್ತಿವೆ. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಕನಿಷ್ಠ ಎರಡಾದರೂ ಬೃಹತ್ತಾದ ಇಂಗುಗುಂಡಿಗಳನ್ನು ನಿರ್ವಿುಸಿದೆ. ತಾಲೂಕಿನ 32 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿಯೂ ಇಂತಹ ನೂರಾರು ಕಣಿವೆ ಕೆರೆಗಳಿವೆ. ಈ ಕೆರೆಗಳು ನೀರಿಂಗಿಸಿಕೊಳ್ಳುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗುವ ಜತೆ ವನ್ಯಜೀವಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಕೃತಕ ಕೊಳವಾಗಿಯೂ ಕಾರ್ಯ ಮಾಡುತ್ತಿವೆ. ಪ್ರತಿ ವರ್ಷ ಏಪ್ರಿಲ್ ಕೊನೆಯವರೆಗೂ ಈ ಕೊಳಗಳಲ್ಲಿ ನೀರು ಇರುತ್ತಿದ್ದ ಕಾರಣ ವನ್ಯಜೀವಿಗಳಿಗೆ ಕುಡಿಯಲು ನೀರಿನ ಕೊರತೆ ಎದುರಾಗುತ್ತಿರಲಿಲ್ಲ. ಆದರೆ, ಪ್ರಸಕ್ತ ವರ್ಷ ಮಾತ್ರ ಮಾರ್ಚ್ ಅಂತ್ಯದೊಳಗೇ ನೀರಿನ ಕೊರತೆ ಕಾಡತೊಡಗಿದ್ದು, ವನ್ಯ ಸಂಕುಲಕ್ಕೆ ತೊಂದರೆ ತಂದೊಡ್ಡಿದೆ.
2006-17ರಲ್ಲಿ ಇಂತಹ ಕಣಿವೆ ಕೆರೆ ರಚನೆಗಳನ್ನು ನಿರ್ವಿುಸಲಾಗಿತ್ತು. ಇಂಥ ಕೆಲವು ಕೆರೆಗಳು ಸಂಪೂರ್ಣ ಬತ್ತಿದರೆ, ಇನ್ನು ಕೆಲವು ಕೆರೆಗಳು ಒಣಗುವ ಹಂತದಲ್ಲಿವೆ. ಹೀಗಾಗಿ, ನಿತ್ಯದ ದಾಹ ತೀರಿಸಿಕೊಳ್ಳಲು ಕೆರೆಗಳ ಬಳಿ ವನ್ಯಜೀವಿಗಳು ಬಂದು ವಾಪಸಾಗುತ್ತಿವೆ. ತಮ್ಮ ದಾಹ ಇಂಗಿಸಿಕೊಳ್ಳಲು ವಾಸಸ್ಥಳಗಳ ಬಳಿಯ ರೈತರ ಕೃಷಿ ಜಮೀನಿಗೆ ನುಗ್ಗುತ್ತಿವೆ. ಇದರಿಂದ ವನ್ಯಜೀವಿಗಳಿಗೂ ಅಪಾಯವಾಗುವ ಜತೆ ಕೃಷಿಕರ ಬೆಳೆ ರಕ್ಷಣೆಗೂ ಆತಂಕ ಎದುರಾಗಿದೆ.
ಜೋಡು ಕೆರೆಗಳ ನಿರ್ವಣದಿಂದ ನೀರು ಉಳಿಸಬಹುದಾಗಿದ್ದು, ಅರಣ್ಯ ಇಲಾಖೆ ಪ್ರಸ್ತುತ ನಿರ್ವಿುಸಿರುವ ಕೆರೆಗಳ ಪಕ್ಕ ಇನ್ನೊಂದು ಕೆರೆ ನಿರ್ವಿುಸಲು ಮುಂದಾಗಬೇಕು. ಅಕೇಶಿಯಾ ನೆಡುತೋಪುಗಳಿಂದ ಹೆಚ್ಚಿನ ಪ್ರಯೋಜನವಿಲ್ಲ. ಹೀಗಾಗಿ, ಅಕೇಶಿಯಾ ನೆಡುತೋಪುಗಳಲ್ಲಿ ಇಂತಹ ಕೆರೆಗಳ ನಿರ್ಮಾಣ ಹೆಚ್ಚಬೇಕು. | ಶಿವಾನಂದ ಕಳವೆ ಪರಿಸರ ಬರಹಗಾರ
ಮುಖ್ಯವಾಗಿ ಮಳೆ ನೀರು ಇಂಗಿಸುವ ಉದ್ದೇಶ ಈ ಕೆರೆಗಳ ರಚನೆ ಹಿಂದಿದ್ದರೂ ವನ್ಯಜೀವಿಗಳು ವಾಸಿಸುವ, ಸಂಚರಿಸುವ ಮಾರ್ಗವನ್ನು ಅವಲಂಬಿಸಿ ಇಂತಹ ‘ಕಾರಿಡಾರ್’ ಕೆರೆಗಳನ್ನು ನಿರ್ವಿುಸಲಾಗಿತ್ತು. ಮಳೆ ನೀರು ಹಿಡಿದಿಟ್ಟುಕೊಳ್ಳುವ ಈ ಕೆರೆಗಳು ಬೇಸಿಗೆಯಲ್ಲಿ ಪ್ರಾಣಿಗಳಿಗೆ ಅನುಕೂಲ ಆಗುತ್ತಿತ್ತು. ಇದೀಗ ಇಂತಹ ಕೆರೆಗಳು ಬತ್ತಿದ್ದು, ಕೃತಕವಾಗಿ ನೀರು ತುಂಬಲು ಇಲಾಖೆಗೆ ಅವಕಾಶವಿಲ್ಲ. ಆದರೆ, ನೀರಿನ ಬವಣೆ ಹೆಚ್ಚಿದರೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಅನುಮೋದನೆ ಸಿಕ್ಕ ನಂತರ ಕೆರೆಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಲಾಗುವುದು. | ಎಸ್.ಜಿ.ಹೆಗಡೆ ಡಿಎಫ್ಒ ಶಿರಸಿ