

ಹುಬ್ಬಳ್ಳಿ: ಇಲ್ಲಿಯ ಗೋಕುಲ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ 12 ತಂಡಗಳು ಸೇರಿ 75 ಜೋಡೆತ್ತುಗಳು ಪಾಲ್ಗೊಂಡಿದ್ದವು. ಅನ್ನದಾತನ ಒಡನಾಡಿ ಎತ್ತುಗಳ ಮಿಂಚಿನ ಓಟಕ್ಕೆ ಪ್ರೇಕ್ಷಕ ಮನಸೋತು ಹೋಗಿದ್ದ.
ಧಾರಾವತಿ ಹನುಮಂತ ದೇವರ ಕಳಸಾರೋಹಣ ಹಾಗೂ ಬಸವಣ್ಣನ ಕಲ್ಯಾಣ ಮಂಟಪ ಉದ್ಘಾಟನೆಯ ಅಂಗವಾಗಿ ಹಮ್ಮಿಕೊಂಡಿದ್ದ ಖಾಲಿ ಗಾಡಾ ಓಡಿಸುವ ಸ್ಪರ್ಧೆಗೆ ಬೆಳಗಾವಿ, ಧಾರವಾಡ ಗದಗ, ಹಾವೇರಿ, ಬಾಗಲಕೋಟೆ ಸೇರಿ ವಿವಿಧೆಡೆಯ ರೈತರು ಉತ್ಸಾಹದಿಂದ ಬಂದಿದ್ದರು.
ಒಂದು ಜೋಡಿ ಎತ್ತುಗಳಿರುವ ಖಾಲಿ ಗಾಡಾವನ್ನು ರೈತ ಓಡಿಸಬೇಕು. ಒಂದು ನಿಮಿಷದಲ್ಲಿ ಯಾವ ಗಾಡಾ ಹೆಚ್ಚು ದೂರ ಕ್ರಮಿಸುತ್ತದೋ ಆ ತಂಡ ವಿಜಯಶಾಲಿಯಾಗುತ್ತದೆ. ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ 6 ಬೈಕ್ ಸೇರಿ 31 ವಿಶೇಷ ಬಹುಮಾನ ನೀಡಲಾಯಿತು.
ಹೋರಿಗಳ ಓಟ ವೀಕ್ಷಿಸಲು ಸಾವಿರಾರು ಜನ ಆಗಮಿಸಿದ್ದರು. ಸ್ಪರ್ಧೆಯಲ್ಲಿ ಭರ್ಜರಿ ಹೋರಿಗಳು ಕಂಗೊಳಿಸಿದವು. ಕೆಲ ಎತ್ತುಗಳ ಓಟ ಕಂಡು ಜನ ಹುಬ್ಬೇರಿಸಿದರು. ರೋಚಕ ಓಟಕ್ಕೆ ರೈತರು ಚಪ್ಪಾಳೆ, ಶಿಳ್ಳೆ ಹೊಡೆಯುವ ಮೂಲಕ ಸಂಭ್ರಮಪಟ್ಟರು. ಸ್ಪರ್ಧೆ ನಡುವೆ ಕಂಗಾಲಾದ ಒಂದು ಜೋಡಿ ಎತ್ತು ದಾರಿ ತಪ್ಪಿ ಹೊಲಕ್ಕೆ ನುಗ್ಗಿತ್ತು.
ಗೋಕುಲದ ಶ್ರೀ ಹಾಲಯ್ಯ ಸ್ವಾಮಿ ಹಿರೇಮಠ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಗೋಕುಲ ರೋಡ್ ಠಾಣೆ ಇನ್ಸ್ ಪೆಕ್ಟರ್ ನಾಗರಾಜ ಕಮ್ಮಾರ, ಎಪಿಎಂಸಿ ಸದಸ್ಯ ಬಸವರಾಜ ನಾಯ್ಕರ, ಪಾಲಿಕೆ ಮಾಜಿ ಸದಸ್ಯ ರಾಮಣ್ಣ ಬಡಿಗೇರ, ಕುಮಾರ ಶಕ್ತಿ ಉಣಕಲ್, ಎಸ್.ಎಸ್. ಪಾಟೀಲ ಮ್ಯಾಗೇರಿ, ಲಿಂಗಪ್ಪ ಮ್ಯಾಗೇರಿ ಮತ್ತಿತರರು ಉಪಸ್ಥಿತರಿದ್ದರು.
ಅಮರಗೋಳ ಜೋಡೆತ್ತು ಪ್ರಥಮ: ಸ್ಪರ್ಧೆಯಲ್ಲಿ ಹುಬ್ಬಳ್ಳಿ ತಾಲೂಕಿನ ಅಮರಗೋಳದ ಶ್ರೀ ಸಿದ್ಧೇಶ್ವರ ಪ್ರಸನ್ನ ತಂಡದ ಜೋಡೆತ್ತು ಪ್ರಥಮ ಬಹುಮಾನ ಪಡೆದವು. ತಳಬಾವಿಯ ಶ್ರೀ ನಾಗಮ್ಮದೇವಿ ತಂಡ ದ್ವಿತೀಯ ಹಾಗೂ ತುಮರಿಕೊಪ್ಪ-ಕುಂಕೂರಿನ ಶ್ರೀ ಗುರು ಸಿದ್ಧಾರೂಢ ತಂಡ ತೃತೀಯ ಬಹುಮಾನ ಪಡೆದುಕೊಂಡವು.