ಎತ್ತಿನಹೊಳೆ ಯೋಜನೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

21_HSN_03
Published on

ಹಾಸನ: ಬಯಲು ಸೀಮೆಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಗೆ ಜಿಲ್ಲೆಯ ಸಾವಿರಾರು ಜನ ರೈತರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. ಆದರೂ ಈವರೆಗೂ ಪರಿಹಾರ ನೀಡಿಲ್ಲ. ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ನೇತೃತ್ವದಲ್ಲಿ ನೂರಾರು ರೈತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರ ಎಚ್.ಆರ್. ನವೀನ್‌ಕುಮಾರ್, ಎತ್ತಿನಹೊಳೆ ಯೋಜನೆಗೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಶಿವಪುರ ಕಾವಲು, ಹಾಸನ ತಾಲೂಕಿನ ಐದಳ್ಳ ಕಾವಲು ಅರಸೀಕರೆ ತಾಲೂಕಿನ ನಾಯಕನಕೆರೆ ಕಾವಲಿನ ಸುತ್ತಮುತ್ತಲಿನ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು 2022 ರಲ್ಲೇ ಅವಾರ್ಡ್ ನೋಟೀಸ್ ನೀಡಿದ್ದರೂ ಇದುವರೆಗೂ ಇವರುಗಳಿಗೆ ಸೂಕ್ತ ಪರಿಹಾರವನ್ನು ನೀಡಿಲ್ಲ ಎಂದು ಆರೋಪಿಸಿದರು.

ಹಲವು ವರ್ಷಗಳಿಂದ ಸಾಗುವಳಿ ಮಾಡಿ ಮಂಜೂರಾತಿ ಚೀಟಿ ಪಡೆದು, ಪಹಣಿಯಲ್ಲಿ ಹೆಸರು ಬರುತ್ತಿದ್ದ ಭೂಮಿಗೆ ವಿಶೇಷ ಭೂಸ್ವಾಧೀನಾಧಿಕಾರಿ ದಾಖಲೆಗಳನ್ನು ಪರಿಶೀಲಿಸಿ ಅವಾಡ್ ನೋಟೀಸ್ ನೀಡಿದ ಮೇಲೆ, ಅರಣ್ಯ ಇಲಾಖೆಯವರು ಬೇಲೂರು ತಾಲ್ಲೂಕಿನ ಶಿವಪುರ ಕಾವಲು ಗ್ರಾಮಗಳ ಸುತ್ತಮುತ್ತಲಿನ ಸುಮಾರು 30 ಕ್ಕೂ ಹೆಚ್ಚು ಜನರಿಗೆ ಭೂಪರಿಹಾರ ನೀಡುವುದನ್ನು ತಡೆಹಿಡಿದಿದ್ದಾರೆ. ಇದರಲ್ಲಿ ಬಹುತೇಕರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದೆಂದು ಇಲಾಖೆ ತಕರಾರು ಎತ್ತಿದೆ. ಇದು ಬಡ ರೈತರ ಮೇಲೆ ಅರಣ್ಯ ಇಲಾಖೆ ನಡೆಸುತ್ತಿರುವ ದೌರ್ಜನ್ಯವಾಗಿದೆ. ಇಷ್ಟು ಮಾತ್ರವಲ್ಲದೇ ಈಗಲೂ ಅನುಭವದಲ್ಲಿರುವ, ಎಲ್ಲ ರೀತಿಯ ಭೂಮಿ ದಾಖಲೆಗಳನ್ನು ಹೊಂದಿರುವ ಕೃಷಿ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಪ್ರತಿ ದಿನ ರೈತರನ್ನು ಅಧಿಕಾರಿಗಳು ಬೆದರಿಸುತ್ತಿದ್ದಾರೆ. ಇದರಿಂದ ರೈತರು ನೆಮ್ಮದಿಯಿಂದ ಕೃಷಿ ಮಾಡಲು ಸಾದ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎತ್ತಿನಹೊಳೆ ಯೋಜನೆಗೆ ಭೂಮಿ ಕಳೆದುಕೊಂಡ ಬೇಲೂರು ತಾಲ್ಲೂಕಿನ ಶಿವಪುರ ಕಾವಲು ಸೇರಿದಂತೆ ಇತರೆ ಪ್ರದೇಶದ ರೈತರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು. 2022ರಂದು ಪರಿಹಾರದ ಅವಾರ್ಡ್ ನೋಟಿಸ್ ನೀಡಿದ್ದು ಇದುವರೆಗು ಪರಿಹಾರದ ಹಣ ಪಾವತಿಯಾಗದಿರುವುದರಿಂದ, ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಮತ್ತು ಬಡ್ಡಿ ಸಹಿತ ಪರಿಹಾರವನ್ನು ನೀಡಬೇಕು. ರೈತರ ಪರಿಹಾರಕ್ಕೆ ಅರಣ್ಯ ಇಲಾಖೆ ತಂದಿರುವ ತಡೆಯಾಜ್ಞೆಯನ್ನು ರದ್ದುಪಡಿಸಬೇಕು. ಭೂಸ್ವಾಧೀನ ಮಾಡಿಕೊಳ್ಳದೇ ಕಳೆದ 4 ವರ್ಷಗಳಿಂದ ಉಳಿಕೆ ಕೃಷಿ ಭೂಮಿಯ ಮೇಲೆ ಕಾಲುವೆಯ ಮಣ್ಣು ಮತ್ತು ಕಲ್ಲಿನ ರಾಶಿ ಹಾಕಿ ವ್ಯವಸಾಯಕ್ಕೆ ಅಡ್ಡಿ ಪಡಿಸಲಾಗಿದೆ. ಇದಕ್ಕೆ ಸೂಕ್ತ ರೀತಿಯ ಬೆಳೆ ಪರಿಹಾರ ನೀಡಬೇಕು. ಮತ್ತು ಮಣ್ಣಿನ ಗುಡ್ಡೆಯನ್ನು ತೆರವುಗೊಳಿಸಬೇಕು. ಅರಣ್ಯ ಇಲಾಖೆಯಿಂದ ರೈತರು ಉಳುಮೆ ಮಾಡುತ್ತಿರುವ ಕೃಷಿ ಭೂಮಿಗೆ ಸಂಬಧಿಸಿದ ಎಲ್ಲಾ ದಾಖಲೆಗಳು ರೈತರ ಹೆಸರಿಗೆ ಇದ್ದರೂ, ಅದು ಅರಣ್ಯ ಇಲಾಖೆಗೆ ಸೇರಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ರೈತರನ್ನು ಬೆದರಿಸುವ ಕೆಲಸ ಮಾಡಲಾಗುತ್ತಿದ್ದು ರೈತರಿಗೆ ತೊಂದರೆ ಕೂಡುವ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಿವಪುರ ಕಾವಲಿನ ಸರ್ವೆ ನಂಬರ್ 80/2 ರಲ್ಲಿ 1.32 ಎಕ್ಕರೆ ಭೂಮಿಯನ್ನು ಎತ್ತಿನಹೊಳೆ ಯೋಜನೆಗೆ ಕಳೆದುಕೊಂಡು ಇದುವರೆಗೂ ಪರಿಹಾರ ಸಿಗದ ಕಾರಣ ಬೇಸತ್ತು ವಡ್ಡರಹಳ್ಳಿ ಗ್ರಾಮದ ನಿವಾಸಿಯಾಗಿದ್ದ 55 ವರ್ಷದ ರಂಗಸ್ವಾಮಿ ಎಂಬುವವರು ಕಳೆದ ಡಿಸೆಂಬರ್ 11ರಂದು ಇದೇ ಎತ್ತಿನ ಹೊಳೆ ಕಾಲುವೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡು 5 ವರ್ಷಗಳದರೂ ಇದುವರೆಗೂ ಭೂ ಪರಿಹಾರ ಸಿಗದ ಕಾರಣ ರೈತರು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶ ಮಾಡಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿಸಬೇಕು ಕರ್ನಾಟಕ ಪ್ರಾಂತ ರೈತ ಸಂಘದ ಹಾಸನ ಜಿಲ್ಲಾ ಸಮಿತಿಯು ಮನವಿ ಮಾಡಿಕೊಳ್ಳುತ್ತದೆ ಎಂದರು.

ಪ್ರತಿಭಟನೆಯಲ್ಲಿ ಶಿವಪುರ ಕಾವಲಿನ ಗ್ರಾಮಸ್ಥರಾದ ಸಿದ್ದರಾಜು, ಗಂಗಾಧರ್, ಉದಯ ಕುಮಾರ್, ಗೋವಿಂದರಾಜು, ರಂಗಸ್ವಾಮಿ, ಪುಟ್ಟರಾಜು ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net