

ಸಕಲೇಶಪುರ: ತಾಲೂಕಿನಲ್ಲಿ ಮೂಲಸೌಕರ್ಯ ಕಲ್ಪಿಸದ ಹೊರತು ಎತ್ತಿನಹೊಳೆ ಯೋಜನೆಯ ಟ್ರಯಲ್ ರನ್‌ಗೆ ಅವಕಾಶ ನೀಡುವುದಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ವಿಶ್ವೇಶ್ವರ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಅವರೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಗಸ್ಟ್ ತಿಂಗಳಾಂತ್ಯಕ್ಕೆ ಎತ್ತಿನಹೊಳೆ ಟ್ರಯಲ್ ರನ್ ಆರಂಭಿಸಲು ಇಲಾಖೆ ಯೋಜನೆ ರೂಪಿಸಿದೆ. ಆದರೆ ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಎತ್ತಿನಹೊಳೆ ಯೋಜನೆ ಕಾರ್ಯಾರಂಭವಾಗುವ ವೇಳೆ ಇಡಿ ತಾಲೂಕಿನ ಸಮಗ್ರ ಸೌಕರ್ಯ ಕಲ್ಪಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈ ಹಿನ್ನ್ನೆಲೆಯಲ್ಲಿ ತಾಲೂಕಿನ ಜನತೆ ಉದಾರ ಮನಸ್ಸಿನಿಂದ ಯೋಜನೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಯೋಜನೆ ತಾಲೂಕಿನಲ್ಲಿ ಶೇ.90 ರಷ್ಟು ಮುಕ್ತಾಯಗೊಂಡಿದ್ದು ಟ್ರಯಲ್ ರನ್‌ಗೆ ದಿನಗಣನೆ ಆರಂಭವಾಗಿದೆ.
ಆದರೆ ಸರ್ಕಾರ ಯೋಜನೆ ಆರಂಭದ ವೇಳೆ ನೀಡಿದ ಭರವಸೆಯಂತೆ ತಾಲೂಕಿಗೆ ಯಾವುದೇ ರೀತಿಯಲ್ಲೂ ಮೂಲಸೌಕರ್ಯ ಕಲ್ಪಿಸಿಲ್ಲ. ಪರಿಣಾಮ ಎತ್ತಿನಹೊಳೆಯ ಮೂಲ ನೆಲೆಯಲ್ಲಿರುವ ಜನತೆ ಇಂದಿಗೂ ರಸ್ತೆ, ವಿದ್ಯುತ್, ಕುಡಿಯುವ ನೀರಿನಲ್ಲದೆ ಪರದಾಡುತ್ತಿದ್ದಾರೆ. ಆದ್ದರಿಂದ ತಾಲೂಕಿನ ಜನರಿಗೆ ಅಂದು ನೀಡಿದ್ದ ಬೇಡಿಕೆ ಸಂಪೂರ್ಣ ಈಡೇರುವವರೆಗೂ ಟ್ರಯಲ್ ರನ್‌ಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಇಂತಹ ಪ್ರಯತ್ನಕ್ಕೆ ಸರ್ಕಾರ ಮುಂದಾದರೆ ಕ್ಷೇತ್ರದ ಜನತೆಯೊಂದಿಗೆ ಯೋಜನಾ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿತ್ತಸಣ್ಣಯ್ಯ ಮಾತನಾಡಿ, ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆಯ ಶೇ.95 ರಷ್ಟು ಕಾಮಗಾರಿ ಮುಕ್ತಾಯವಾಗಿದೆ. ಸರ್ಕಾರದ ಆದೇಶದಂತೆ ಅಗಸ್ಟ್ ವೇಳೆಗೆ ಟ್ರಯಲ್ ರನ್ ಆರಂಭಿಸಿ ತಾಲೂಕಿನ ನಾಗರ ಗ್ರಾಮದಲ್ಲಿರುವ ವಿಆರ್ 4ಕ್ಕೆ ನೀರು ಹರಿಸುವ ಚಿಂತನೆ ಇದೆ. ನವೆಂಬರ್ ಮೊದಲ ವಾರದಲ್ಲಿ 35 ಕಿ.ಮೀ.ವರೆಗೂ ನೀರು ಹರಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಇರುವ ಕೆಲ ಸಮಸ್ಯೆಗಳ ನಿವಾರಣೆಗೆ ಶಾಸಕರ ಸಹಕಾರ ಅಗತ್ಯವಿದೆ ಎಂದರು.
ಈ ವೇಳೆ ಮುಖ್ಯ ಅಭಿಯಂತರ ವರ್ಧಯ್ಯ, ಇಇ ವೆಂಕಟೇಶ್ ಇತರರು ಇದ್ದರು.