

ಸಕಲೇಶಪುರ: ಎತ್ತಿನಹೊಳೆ ಮೂಲ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಲು ಮುಂದಾಗದಿರುವುದು ಖಂಡನೀಯ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಹೇಳಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಪಟ್ಟಣದ ಎತ್ತಿನಹೊಳೆ ಕಚೇರಿ ಮುಂಭಾಗ ಪ್ರತಿಭಟನೆ ಕುಳಿತ ಹೆತ್ತೂರು ಹಾಗೂ ಹೆಬ್ಬಸಾಲೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ, ಮಲೆನಾಡಿಗರು ತ್ಯಾಗ ಮಾಡಿದ್ದರಿಂದ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಂಡಿದೆ. ಆದರೆ ಎತ್ತಿನಹೊಳೆ ಯೋಜನೆಯ ಮೂಲ ಪ್ರದೇಶಗಳ ಅಭಿವೃದ್ದಿಗೆ ಸರ್ಕಾರ ಹೆಚ್ಚಿನ ಅನುದಾನ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎತ್ತಿನಹೊಳೆ ಯೋಜನೆ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ ಬರುತ್ತಿದ್ದ ಹಣ ಈ ಹಿಂದೆ ಹೊಳೆನರಸೀಪುರಕ್ಕೆ ಹೋಗುತ್ತಿತ್ತು. ಇದೀಗ ಹಾಸನಕ್ಕೂ ಸಹ ಹೋಗುತ್ತಿದೆ. ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಸುಮಾರು 1.25ಲಕ್ಷ ಮರಗಳನ್ನು ಕಡಿಯಲಾಗಿದೆ. ಆದರೆ ಮತ್ತೆ ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. 11,500 ರೂ. ಅಂದಾಜು ವೆಚ್ಚದಲ್ಲಿ ಆರಂಭಗೊಂಡ ಯೋಜನೆ 30,000 ಕೋಟಿ ರೂ.ಗೆ ಏರಿದರು ಸಹ ಇನ್ನು ಬಯಲು ಪ್ರದೇಶಗಳಿಗೆ ಹನಿ ನೀರು ಕೊಡಲು ಸಾಧ್ಯವಾಗಿಲ್ಲ. ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡ ಹೆತ್ತೂರು ದೇವರಾಜ್ ಮಾತನಾಡಿ, ಮಲೆನಾಡು ಭಾಗದಿಂದ ಬಯಲು ಸೀಮೆಗೆ ಸಾವಿರಾರು ಕೋಟಿ ವೆಚ್ಚದ ಯೋಜನೆಯ ಎತ್ತಿನಹೊಳೆ ಕಾಮಗಾರಿಯಿಂದ ಮಲೆನಾಡು ಭಾಗದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಈ ಕುರಿತು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಮುಖ್ಯ ಕಚೇರಿಗೆ ರಸ್ತೆಗಳನ್ನು ನಿರ್ಮಿಸುವಂತೆ ಮನವಿ ಮಾಡಿದ್ದೆವು. ಆದರೆ ಸರ್ಕಾರದಲ್ಲಿ ಹಣವಿಲ್ಲ ಎಂಬ ಕಾರಣಕ್ಕೆ ನಮ್ಮ ಮನವಿಯನ್ನು ತಿರಸ್ಕರಿಸಿದ್ದಾರೆ. ಈ ಭಾಗದಲ್ಲಿ ಯಾವ ಪಕ್ಷಕ್ಕೆ ಜನರು ಮತ ಹಾಕುತ್ತಾರೆ ಎಂಬ ಅಂಕಿ ಅಂಶದ ಮೇಲೆ ರಸ್ತೆಗಳನ್ನು ಮಾಡಿಕೊಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ ಆದರಿಂದ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಿಗೆ ೇರಾವ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಎತ್ತಿನಹೊಳೆ ಯೋಜನೆಯ ಇಂಜಿನಿಯರ್ ಮನವಿ ಸಲ್ಲಿಸಿ ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಮಾಜಿ ಜಿ.ಪಂ.ಸದಸ್ಯ ಪರ್ವತಯ್ಯ, ಹೆಬ್ಬಸಾಲೆ ಗ್ರಾ.ಪಂ. ಅಧ್ಯಕ್ಷ ಮಹೇಶ್, ಬಿಜೆಪಿ ಹಿರಿಯ ಮುಖಂಡ ಹೆತ್ತೂರು ದೇವರಾಜ್, ಮೇಘರಾಜ್, ಎಚ್.ಎಂ.ರಾಜು, ಡಿಲಾಕ್ಷ, ,ಹಳ್ಳಿಬೈಲು ನಾಗರಾಜ್, ನೇತ್ರಾವತಿ ನಾಗರಾಜ್, ಸತೀಶ್ , ರಾಧಾಕೃಷ್ಣ ಮತ್ತಿತರರಿದ್ದರು.