

ದೊಡ್ಡಬಳ್ಳಾಪುರ: ಎತ್ತಿನಹೊಳೆ ಹಾಗೂ ಎಚ್.ಎನ್ ವ್ಯಾಲಿ ಯೋಜನೆ ಕಾರ‌್ಯಗತವಾದರೆ ದೊಡ್ಡಬಳ್ಳಾಪುರ ತಾಲೂಕಿನ ಎಲ್ಲ ಕೆರೆಗಳು ಪೂರ್ಣವಾಗಿ ತುಂಬಲಿವೆ ಎಂದು ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು.
ತಾಲೂಕಿನ ಕಸಬಾ ಹೋಬಳಿ ಲಿಂಗನಹಳ್ಳಿ ಕೆರೆ ಕೋಡಿ ಹರಿದಿದ್ದ ಹಿನ್ನೆಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಗಂಗಾ ಪೂಜೆ ಹಾಗೂ ಬಾಗಿನ ಸಮರ್ಪಣೆ ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚೆಗೆ ಸುರಿದಿರುವ ಮಳೆಯಿಂದಾಗಿ ಸಾಕಷ್ಟು ಕೆರೆಗಳು ತುಂಬಿದ್ದರೂ ಸಹ ತಾಲೂಕಿನಲ್ಲಿ ಇನ್ನೂ ಶೇ.53 ಕೆರೆಗಳು ತುಂಬಬೇಕಿದೆ. ಕೆರೆಗಳು ತುಂಬಿದಾಗ ಬಾಗಿನ ಅರ್ಪಿಸುವುದು, ಪೂಜೆ ನೆರವೇರಿಸುವುದು ನಮ್ಮ ಸಂಸ್ಕೃತಿಯ ಭಾಗ ಎಂದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಈ ಹಿಂದಿನ ವರ್ಷಗಳಲ್ಲಿ ತಾಲೂಕಿನಲ್ಲಿ ನೀರಿನ ಸಮಸ್ಯೆ ತಲೆದೋರಿ, ಸಮಸ್ಯೆ ಎದುರಿಸುವಂತಾಗಿತ್ತು. ಬಿಜೆಪಿ ಸರ್ಕಾರ ಬಂದಾಗಿನಿಂದ 180 ಕೊಳವೆಬಾವಿಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಈ ವರ್ಷ ವರುಣದೇವನ ಕೃಪೆಯಿಂದ ಸಾಕಷ್ಟು ಮಳೆಯಾಗಿ, ಕೆರೆಗಳಿಗೆ ನೀರು ಬಂದಿರುವುದು ಸಂತಸ ತಂದಿದೆ ಎಂದರು.
ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, 23 ವರ್ಷಗಳ ನಂತರ ಲಿಂಗನಹಳ್ಳಿ ಕೆರೆ ಕೋಡಿ ಬಿದ್ದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕೊನಘಟ್ಟ ಗ್ರಾಪಂ ಅಧ್ಯಕ್ಷೆ ಮೊಹಿಸಿನಾ ತಾಜ್, ಉಪಾಧ್ಯಕ್ಷ ಸೋಮಶೇಖರ್, ಮುಖಂಡರಾದ ಕೆ.ಎಂ.ಕೃಷ್ಣಮೂರ್ತಿ, ಸೋಮರುದ್ರಶರ್ಮ, ಪಟೇಲ್ ಶಿವಣ್ಣ, ಶ್ರೀನಿವಾಸ್ ಭಾಗವಹಿಸಿದ್ದರು.