

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮುಂಗಾರು ಪೂರ್ವದಿಂದಲೂ ಮಳೆ ನಿರಂತರವಾಗಿ ಸುರಿಯುತ್ತಲೇ ಇದೆ. ಧಾರಾಕಾರ ಮಳೆಯಿಂದಾಗಿ ಮಲೆನಾಡು ಅಕ್ಷರಶಃ ಮಳೆನಾಡಾಗಿ ಪರಿವರ್ತನೆಯಾಗಿದೆ. ಹೀಗಾಗಿ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಚಿಕ್ಕಮಗಳೂರಿನ ಒಂದೊAದೇ ಪ್ರಮುಖ ಪ್ರವಾಸಿ ತಾಣಗಳಿಗೆ ಮಳೆಗಾಲದ ಅವಧಿಯಲ್ಲಿ ನಿರ್ಬಂಧ ಬೀಳುವ ಸಾಧ್ಯತೆ ದಟ್ಟವಾಗಿದೆ. ಇದರ ಮೊದಲ ಭಾಗವಾಗಿ ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿಪಡೆದಿರುವ ಮೂಡಿಗೆರೆ ತಾಲೂಕಿನ ಎತ್ತಿನ ಭುಜಕ್ಕೆ ಒಂದು ತಿಂಗಳ ಕಾಲ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.
ಹೌದು. ಜುಲೈ ೧ರಿಂದ ಜುಲೈ ೩೧ರವರೆಗೆ ಎತ್ತಿನಭುಜಕ್ಕೆ ಪ್ರವಾಸಿಗರು ಭೇಟಿ ನೀಡುವುದನ್ನು ನಿರ್ಬಂಧಿಸಿ ಚಿಕ್ಕಮಗಳೂರು ವಿಭಾಗದ ಉಪಅರಣ್ಯ ಸರಂಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ಯಾವುದೇ ಪ್ರವಾಸಿಗರು ಅನುಮತಿ ಪಡೆದು ಅಥವಾ ಅನುಮತಿ ಪಡೆಯದೆ ಆಗಮಿಸುವಂತಿಲ್ಲ ಎಂದು ತಿಳಿಸಿದ್ದಾರೆ.
ಮಲೆನಾಡು ಭಾಗದಲ್ಲಿ ಈ ಬಾರಿ ಮುಂಗಾರು ಪೂರ್ವದಲ್ಲಿಯೇ ಧಾರಾಕಾರ ಮಳೆ ಸುರಿದಿತ್ತು. ಮುಂಗಾರು ಆರಂಭದಲ್ಲಿಯೇ ಮಳೆರಾಯ ಅಬ್ಬರಿಸಿದ್ದರಿಂದಾಗಿ ಮಲೆನಾಡಿನಾದ್ಯಂತ ಅವಘಡಗಳು ಸಂಭವಿಸಲಾರAಭಿಸಿವೆ. ಇದರ ನಡುವೆ ಗುಡ್ಡ ಕುಸಿತವೂ ಹೆಚ್ಚುತ್ತಿರುವ ಕಾರಣದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಎತ್ತಿನಭುಜಕ್ಕೆ ನಿರ್ಬಂಧ ಹೇರಲಾಗಿದೆ.
ಮೂಡಿಗೆರೆ ವಲಯದ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಹೀಗಾಗಿ ಭೂಕುಸಿತ ಉಂಟಾಗುವ ಸಾಧ್ಯತೆಯೂ ಇದೆ. ಎತ್ತಿನ ಭುಜ ಚಾರಣ ಪ್ರದೇಶದಲ್ಲಿ ಹೆಚ್ಚಿನ ಮಂಜು ಕವಿದ ವಾತಾವರಣ ಇರುವುದರಿಂದ ಪ್ರವಾಸಿಗರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಪ್ರವಾಸಿಗರ ಸುರಕ್ಷತೆ ಹಿತದೃಷ್ಟಿಯಿಂದ ಒಂದು ತಿಂಗಳ ಕಾಲ ಎತ್ತಿನ ಭುಜ ಚಾರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ಡಿಎಫ್ ಒ ಆದೇಶದಲ್ಲಿ ತಿಳಿಸಿದ್ದಾರೆ.
ನಿಷೇಧಕ್ಕೆ ಕಾರಣಗಳು
ಎತ್ತಿನ ಭುಜಕ್ಕೆ ೭ ಕಿಮೀ ಚಾರಣ ಹೋಗಿ ಅಲ್ಲಿನ ಸೌಂದರ್ಯ ಸವಿಯಬೇಕು. ಇಲ್ಲಿಗೆ ಯಾವುದೇ ವಾಹನಗಳು ಹೋಗುವುದಿಲ್ಲ. ಒಂದು ವೇಳೆ ಚಾರಣಕ್ಕೆ ತೆರಳಿದಾಗ ಯಾವುದೇ ರೀತಿಯ ಸಮಸ್ಯೆಯಾದರೂ ಪ್ರವಾಸಿಗರನ್ನು ಅಲ್ಲಿನಿಂದ ಹೊತ್ತುಕೊಂಡೆ ವಾಪಸ್ ಕರೆತರಬೇಕಿದೆ. ಹೀಗಾಗಿ ಪ್ರವಾಸಿಗರ ರಕ್ಷಣೆ ಮಾಡುವುದು ಕಷ್ಟ ಸಾಧ್ಯ.
ಇನ್ನು ಎತ್ತಿನಭುಜ ದಟ್ಟಾರಣ್ಯದಿಂದ ಕೂಡಿರುವ ಪ್ರದೇಶ. ಇಲ್ಲಿ ಕಾಡುಪ್ರಾಣಿಗಳ ಕಾಟವು ಅತಿ ಹೆಚ್ಚಾಗಿದೆ. ಮಳೆಯೂ ಬಾರಿ ಪ್ರಮಾಣದಲ್ಲಿ ಸುರಿಯುತ್ತಿರುವುದರಿಂದ ಜಾರುವ ಪ್ರದೇಶವೂ ಹೆಚ್ಚಾಗಿದೆ. ಹೀಗಾಗಿ ಎತ್ತಿನ ಭುಜದಲ್ಲಿ ಚಾರಣಕ್ಕೆ ಬ್ರೇಕ್ ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಇದೀಗ ಅರಣ್ಯ ಇಲಾಖೆ ಒಂದು ತಿಂಗಳ ಕಾಲ ಚಾರಣವನ್ನು ನಿರ್ಬಂಧಿಸಿದೆ.
ಕಾವಲುಗಾರರ ನೇಮಕ
ಮಳೆಗಾಲದಲ್ಲಂತೂ ಎತ್ತಿನಭುಜದ ಸೌಂದರ್ಯ ದುಪ್ಪಟ್ಟಾಗಿರುತ್ತದೆ. ಹೀಗಾಗಿ ಮಳೆಗಾಲದಲ್ಲಿ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಅತಿಹೆಚ್ಚು. ಆಲ್ ಲೈನ್ ಮೂಲಕ ನೋಂದಣಿ ಮಾಡಿಕೊಂಡು ಇಲ್ಲಿಗೆ ಪ್ರವಾಸಕ್ಕೆ ಬರಬೇಕು. ಆದರೆ ಕೆಲವರು ಮಾಹಿತಿ ಕೊರತೆಯಿಂದ ಆನ್ ಲೈನ್ ನೋಂದಣಿ ಇಲ್ಲದೆ ಆಗಮಿಸುತ್ತಾರೆ. ಹೀಗಾಗಿ ಯಾರೊಬ್ಬರಿಗೂ ಎತ್ತಿನಭುಜಕ್ಕೆ ಪ್ರವೇಶ ನೀಡದಿರುವ ಕಾರಣಕ್ಕೆ ಟ್ರಕ್ಕಿಂಗ್ ಸ್ಪಾಟ್ ಆರಂಭದಲ್ಲೇ ಕಾವಲುಗಾರರನ್ನು ನೇಮಿಸಲು ಡಿಎಫ್‌ಒ ಸೂಚನೆ ನೀಡಿದ್ದಾರೆ.
ಆರಂಭಿಕ ಹಂತಕ್ಕೆ ಬರುವ ಪ್ರವಾಸಿಗರಿಗೆ ಕಾವಲುಗಾರರು ಸೂಕ್ತ ಮಾಹಿತಿ ನೀಡಿ ವಾಪಸ್ ಕಳುಹಿಸಬೇಕು. ಜೊತೆಗೆ ಟ್ರಕ್ಕಿಂಗ್ ಮಾರ್ಗಕ್ಕೂ ಬೇಲಿ ಹಾಕಿ ಬಂದ್ ಮಾಡುವಂತೆ ಆದೇಶಿಸಿದ್ದಾರೆ.
ಕಳೆದ ವರ್ಷವೂ ಅವಕಾಶವಿರಲಿಲ್ಲ
ಕಳೆದ ವರ್ಷವೂ ಸುರಿದ ಧಾರಾಕಾರ ಮಳೆಯಿಂದಾಗಿ ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸಿಗರನ್ನು ಕೆಲ ದಿನಗಳ ಕಾಲ ನಿರ್ಬಂಧಿಸಲಾಗಿತ್ತು. ಅದರಲ್ಲಿಯೂ ದತ್ತಪೀಠಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯದ ಕವಿಕಲ್‌ಗಂಡಿ ಬಳಿ ಗುಡ್ಡ ಕುಸಿತಗೊಂಡ ಪರಿಣಾಮ ದತ್ತಪೀಠ ಮಾರ್ಗದಲ್ಲಿ ಬರೋಬ್ಬರಿ ಒಂದು ತಿಂಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.
ಇದಲ್ಲದೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಕಡ್ಡಾಯವಾಗಿ ಪ್ರವಾಸಿಗರು ಅರಣ್ಯ ಇಲಾಖೆ ಅನುಮತಿ ಪಡೆಯುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಜೊತೆಗೆ ಅರಣ್ಯ ಇಲಾಖೆಯಿಂದ ಬಲ್ಲಾಳರಾಯನದುರ್ಗ, ಎತ್ತಿನಭುಜ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಕೆಲ ದಿನಗಳ ಕಾಲ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.
ಕೆಲ ದಿನಗಳ ಹಿಂದಷ್ಟೇ ಬಲ್ಲಾಳರಾಯನ ದುರ್ಗಕ್ಕೆ ಪ್ರವಾಸಕ್ಕೆ ಬಂದಿದ್ದ ಚಿತ್ರದುರ್ಗ ಮೂಲದ ೧೦ ವಿದ್ಯಾರ್ಥಿಗಳು ಚಾರಣದ ವೇಳೆ ದಿಕ್ಕುತಪ್ಪಿ ದಟ್ಟ ಕಾಡಿನ ನಡುವೆ ಕಾಣೆಯಾಗಿದ್ದರು. ವಿದ್ಯಾರ್ಥಿಗಳನ್ನು ಪತ್ತೆಮಾಡಿ ಕರೆತರಲು ಅರಣ್ಯ ಇಲಾಖೆ ಹರಸಾಹಸಪಡಬೇಕಾಯಿತು. ಜೊತೆಗೆ ಸ್ಥಳೀಯರ ನೆರವಿನಿಂದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗಿತ್ತು.
ಈ ಪ್ರಕರಣದ ನಡೆದ ಬಳಿಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಪ್ರವಾಸಿಗರು ಚಾರಣಕ್ಕೆ ಹೋದ ಸಂದರ್ಭದಲ್ಲಿ ಯಾವುದೇ ಅವಘಡಗಳು ಸಂಭವಿಸಬಾರದು. ದಾರಿತಪ್ಪಿ ಅಲೆಯುವಂತೆಯೂ ಆಗಬಾರದು ಎಂದು ಎಲ್ಲ ಅರಣ್ಯ ವಿಭಾಗಗಳಿಗೂ ಸೂಚನೆ ನೀಡಿದ್ದರು.