‘ಎಣ್ಣೆ’ ಮಾರುತ್ತಿದ್ದ ದಂಪತಿಗೆ ಗೃಹಬಂಧನ

9 lxr 2.a
Published on

ಲಕ್ಷ್ಮೇಶ್ವರ: ಕುಡಿತದಿಂದ ಹೆಚ್ಚುತ್ತಿರುವ ಕೌಟುಂಬಿಕ ಕಲಹಗಳಿಂದ ಬೇಸತ್ತ ತಾಲೂಕಿನ ಯತ್ನಳ್ಳಿ ಗ್ರಾಮದ ಮಹಿಳೆಯರು ಅಕ್ರಮ ಮದ್ಯ ಮಾರುತ್ತಿದ್ದ ದಂಪತಿಯನ್ನು ಶನಿವಾರ ಕೂಡಿಹಾಕಿ ಪ್ರತಿಭಟನೆ ನಡೆಸಿದರು.

ಯತ್ನಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಆಗಾಗ್ಗೆ ವಿರೋಧ ವ್ಯಕ್ತವಾಗುತ್ತಲೇ ಬಂದಿತ್ತು. ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ನಿತ್ಯವೂ ಗಂಡ-ಹೆಂಡತಿ ಜಗಳ ಸಾಮಾನ್ಯವಾಗಿದ್ದವು. ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ರೋಸಿ ಹೋಗಿದ್ದ ಗ್ರಾಮದ ಮಹಿಳೆಯರು ಏಪ್ರಿಲ್ ತಿಂಗಳಲ್ಲೇ ‘ಗ್ರಾಮವನ್ನು ಮದ್ಯಮುಕ್ತವಾಗಿಸಲು ಎಲ್ಲರೂ ಕೈ ಜೋಡಿಸಿ’ ಎಂಬ ಭಿತ್ತಿಪತ್ರಗಳನ್ನು ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಅಂಟಿಸಿದ್ದರು.

ಕರೊನಾ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧವಿದ್ದಾಗಲೂ ಗ್ರಾಮದ ಎಸ್​ಸಿ ಕಾಲನಿಯಲ್ಲಿ ನಾಲ್ಕೈದು ಪಟ್ಟು ಹೆಚ್ಚಿನ ದರಕ್ಕೆ ಅಕ್ರಮವಾಗಿ ಮದ್ಯ ಮಾರಾಟ ಮುಂದುವರಿದಿತ್ತು. ಮದ್ಯವ್ಯಸನಿಗಳು ತಂದೆ-ತಾಯಿ, ಹೆಂಡತಿ-ಮಕ್ಕಳೊಂದಿಗೆ ಜಗಳ ಮಾಡಿ, ಮನೆಯಲ್ಲಿನ ಬೆಲೆಬಾಳುವ ವಸ್ತುಗಳನ್ನು ಮಾರಿ ಮದ್ಯ ಸೇವಿಸಿದ್ದಾರೆ. ಅನೇಕರು ಅನಾರೋಗ್ಯಕ್ಕೀಡಾದರೆ, ಕೆಲವರು ಮೃತಪಟ್ಟಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ರೋಸಿ ಹೋದ ಮಹಿಳೆಯರು ಶನಿವಾರ ಬೀದಿಗಿಳಿದು ಗ್ರಾಮದಲ್ಲಿ ಅಕ್ರಮ ಮದ್ಯ ಮಾರುತ್ತಿದ್ದ ರತ್ನವ್ವ ಡೋಣಿ ಮತ್ತು ಆಕೆಯ ಪತಿ ಮಂಜಪ್ಪ ಡೋಣಿ ಅವರನ್ನು ಮನೆಯಲ್ಲಿ ಕೂಡಿ ಹಾಕಿದ್ದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಗ್ರಾಮಸ್ಥರನ್ನು ಸಮಾಧಾನಪಡಿಸಿ ಡೋಣಿ ದಂಪತಿಯನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಗ್ರಾಮದಲ್ಲಿ ಮದ್ಯ ಮಾರಾಟದಿಂದ ಇಡೀ ಗ್ರಾಮದ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು. ಗ್ರಾಮವನ್ನು ಮದ್ಯ ಮುಕ್ತ ಗ್ರಾಮವನ್ನಾಗಿಸಲು ಸಹಕರಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ಗ್ರಾಮದ ಹಿರಿಯ ಮೈಲೆಪ್ಪ ಮ್ಯಾಗೇರಿ, ಮರಿಯಪ್ಪ ದೊಡ್ಡಮನಿ, ದ್ಯಾಮನಗೌಡ ರಾಯನಗೌಡ್ರ, ಮರಿಯವ್ವ ದೊಡ್ಡಮನಿ, ಹನುಮವ್ವ ತಳಗೇರಿ, ಅಕ್ಕಮ್ಮ ದೊಡ್ಡಮನಿ, ಪಕ್ಕವ್ವ ತಳಗೇರಿ, ಮರಿಯವ್ವ ಗುರುನಾಥ ಕಲ್ಮನಿ, ಫಕೀರೇಶ ಮ್ಯಾಗೇರಿ, ಮಂಜುನಾಥ ದೊಡ್ಡಮನಿ, ಬಸವರಾಜ ಗುಡೂರ, ಚಂದ್ರಶೇಖರ ತಳಗೇರಿ, ಮಾರುತಿ ತಳಗೇರಿ, ಮಹಾದೇವಪ್ಪ ದೊಡ್ಡಮನಿ ಇತರರಿದ್ದರು.

ಲಾಕ್​ಡೌನ್ ವೇಳೆಯಲ್ಲಿ ಕೆಲ ದಿನ ಮದ್ಯ ಮಾರಾಟ ನಿಷೇಧಿಸಿದ್ದರಿಂದ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವು. ಯಾವಾಗ ಮದ್ಯ ಮಾರಾಟ ಮತ್ತೆ ಆರಂಭವಾಯಿತೋ, ಮದ್ಯವ್ಯಸನಿಯಾಗಿದ್ದ ನನ್ನ ಗಂಡ ತಾಳಿ ಹರಿದುಕೊಂಡು ಹೋಗಿ ಮಾರಿ ಮದ್ಯ ಕುಡಿದಿದ್ದಾನೆ. ಮದ್ಯ ಮಾರಾಟದಿಂದ ನನ್ನಂತಹ ಎಷ್ಟೋ ಕುಟುಂಬಗಳ ನೆಮ್ಮದಿ ಮಾಯವಾಗಿದೆ. ನನ್ನ ಗಂಡನೊಂದಿಗೆ ಮಕ್ಕಳು ಜಗಳವಾಡಿ ಕಾಲು ಮುರಿದಿದ್ದಾರೆ. ಮದ್ಯ ಮಾರಾಟ ಸಂಪೂರ್ಣ ನಿಷೇಧವಾಗುವವರೆಗೂ ಎಂತಹ ಹೋರಾಟಕ್ಕೂ ಸಿದ್ಧಳಾಗಿದ್ದೇನೆ.| ರೇಣವ್ವ ದೊಡ್ಡಮನಿ, ಯತ್ನಳ್ಳಿ ಗ್ರಾಮಸ್ಥೆ

ಅಕ್ರಮ ಮದ್ಯ ಮಾರಾಟಗಾರರ ಮೇಲೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗುವುದು. ಗ್ರಾಮದಲ್ಲಿ ಮತ್ತೆ ಅಕ್ರಮ ಮದ್ಯ ಮಾರಾಟ ಮಾಡದಂತೆ ಸೂಕ್ತ ನಿಗಾ ವಹಿಸಲಾಗುವುದು.| ವೈ.ಬಿ. ಗಜಾಕೋಶ, ಸಬ್ ಇನ್ಸ್​ಪೆಕ್ಟರ್, ಅಬಕಾರಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net