

ಚಿತ್ರದುರ್ಗ: ಪ್ರಾದೇಶಿಕ ಎಣ್ಣೆಬೀಜ ಬೆಳಗಾರರ ಸಂಘದ ವಾಹನಗಳ ಮೇಲೆ, ಅವರ ಕಂಪನಿಗಳಿಗೆ ಸಂಬಂಧಿಸಿದ ಎಣ್ಣೆ ಉತ್ಪನ್ನಗಳ ಜಾಹೀರಾತು ಅಳವಡಿಕೆಗೆ ಡಿಸಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ ಅನುಮತಿ ನೀಡಿದೆ.
ಎಣ್ಣೆ ಬೀಜ ಬೆಳೆಗಾರರು ಹಾಗೂ ಎಣ್ಣೆ ಉತ್ಪಾದಕ ಸಂಸ್ಥೆಗಳು ತಮ್ಮ ವಾಹನಗಳ ಮೇಲೆ ತಮ್ಮದೇ ಕಂಪನಿಗಳ ಎಣ್ಣೆ ಉತ್ಪನ್ನದ ಜಾಹೀರಾತು ಅಳವಡಿಸಲು ಅನುಮತಿ ನೀಡುವಂತೆ ಪ್ರಾಧಿಕಾರದಲ್ಲಿ ಮನವಿ ಮಾಡಿದ್ದರು.
ಈ ಕುರಿತು ಚರ್ಚಿಸಿದ ಸಭೆ, ಮಧ್ಯಮ ಗಾತ್ರದ ಸರಕು ಸಾಗಾಣಿಕೆ ವಾಹನಗಳಿಗೆ ವಾರ್ಷಿಕ 750 ರೂ., ಭಾರಿ ಗಾತ್ರದ ಸರಕು ಸಾಗಾಣಿಕೆ ವಾಹನಗಳಿಗೆ 2 ಸಾವಿರ ರೂ. ಶುಲ್ಕದೊಂದಿಗೆ ಜಾಹೀರಾತು ಅಳವಡಿಸಲು ಒಪ್ಪಿಗೆ ನೀಡಿತು.
ಸಭೆಯಲ್ಲಿ ಮಜಲು ವಾಹನಗಳ ರಹದಾರಿಗೆ ಸಂಬಂಧಿಸಿದಂತೆ 68 ವಿಷಯಗಳು ಮಂಡನೆಯಾದವು. ಇವುಗಳಲ್ಲಿ 22 ಪರಿಷ್ಕೃತ ವೇಳಾಪಟ್ಟಿ ವಿಷಯಗಳಿಗೆ ಪ್ರಾಧಿಕಾರ ಅನುಮೋದಿಸಿತು. ಪ್ರಾಧಿಕಾರದ ಕಾರ‌್ಯದರ್ಶಿ ವೇಳಾಪಟ್ಟಿ ಕುರಿತಂತೆ ಸಭೆ ಕರೆದು ಪರಿಷ್ಕೃತ ವೇಳಾಪಟ್ಟಿ ನಿಗದಿಗೆ ಸಭೆ ಸೂಚಿಸಿತು.
ಮಾರ್ಗದ ಕಡಿತ, ವಿಸ್ತರಣೆ ಹಾಗೂ ಇತರೆ ನ್ಯಾಯಾಲಯದಿಂದ ಪ್ರಾಧಿಕಾರದ ಪರಿಗಣನೆಗೆ ಸ್ವೀಕೃತಿಯಾದ ವಿಷಯಗಳಿಗೆ ಸಂಬಂಧಿಸಿದ ಅರ್ಜಿದಾರರ ಪರ ವಕೀಲರ ಹಾಗೂ ಆಕ್ಷೇಪಣೆದಾರರ ಪರ ವಕೀಲರು ಹೇಳಿಕೆಗಳನ್ನು ದಾಖಲಿಸಲು ಸಭೆ ಸೂಕ್ತ ಕಾಲಾವಕಾಶ ನೀಡಿತು.
ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಕಾರ‌್ಯದರ್ಶಿ ಆರ್‌ಟಿಒ ಭರತ ಎಂ.ಕಾಳಿಸಿಂಗೆ, ಸಾರಿಗೆ ಇಲಾಖೆ ಅಧೀಕ್ಷಕ ಹೇಮಂತ್‌ಕುಮಾರ್, ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಲ್.ಲಿಂಗಾರೆಡ್ಡಿ ಇತರರಿದ್ದರು.
(ಸಿಟಿಡಿ 18 ಡಿಸಿ ಮೀಟಿಂಗ್)
ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಡಿಸಿ ಟಿ.ವೆಂಕಟೇಶ್, ಎಸ್‌ಪಿ ರಂಜಿತ್ ಕುಮಾರ್ ಬಂಡಾರು, ಬಿ.ಎ.ಲಿಂಗಾರೆಡ್ಡಿ, ಆರ್‌ಟಿಒ ಭರತ ಎಂ.ಕಾಳಿಸಿಂಗೆ, ಹೇಮಂತ್‌ಕುಮಾರ್ ಇದ್ದರು.