

ಹಾಸನ: ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಹಗುರವಾಗಿ ಮಾತನಾಡಿರುವ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರನ್ನು ಸರ್ಕಾರ ಸೇವೆಯಿಂದ ಅಮಾನತು ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆಯಿಂದ ಹೊರಟ ಪ್ರತಿಭಟನಾಕಾರರು ಎನ್‌ಆರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಸರ್ಕಾರ ಮತ್ತು ಎಡಿಜಿಪಿ ಚಂದ್ರಶೇಖರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಆತನನ್ನ ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಐಪಿಎಸ್ ಅಧಿಕಾರಿ ಅಸಭ್ಯ ಭಾಷೆ ಬಳಸಿರುವ ಹದ್ದು ಮೀರಿದ ವರ್ತನೆ. ಸುಳ್ಳು ಹೇಳಿ, ನಕಲಿ ದಾಖಲೆ ಸೃಷ್ಟಿಸಿ ಕರ್ನಾಟಕದಲ್ಲಿ ಉಳಿದುಕೊಂಡಿರುವ ಚಂದ್ರಶೇಖರ್, ತಮ್ಮ ಕುರ್ಚಿಗೆ ಕಂಠಕ ಬಾರದಿರಲಿ ಎಂದು ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವರನ್ನು ಓಲೈಕೆ ಮಾಡಲು ರಾಜಕಾರಣಿಯಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಕರ್ನಾಟಕದ ಹೆಮ್ಮೆಯ ರಾಜಕಾರಣಿ ಎನಿಸಿಕೊಂಡಿರುವ ಕುಮಾರಸ್ವಾಮಿ ಅವರ ವಿರುದ್ಧ ಲಘು ಪದ ಬಳಕೆ ಮಾಡಿ ತಮ್ಮ ಅವಿವೇಕತನ ಪ್ರದರ್ಶನ ಮಾಡಿರುವ ಎಡಿಜಿಪಿ ಏನು ಸಾಚಾ ಅಲ್ಲ, ಅಕ್ರಮ, ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ ಎಂದು ದೂರಿದರು. ಅಷ್ಟೇ ಅಲ್ಲ ಕ್ರಿಮಿನಲ್ ಪ್ರಕರಣಗಳಲ್ಲೂ ಭಾಗಿಯಾಗಿದ್ದಾರೆ. ಅನೇಕ ಪ್ರಕರಣ ಕೋರ್ಟ್ ಮೆಟ್ಟಿಲೇರಿವೆ. ಇಂಥವರು, 2 ಬಾರಿ ಸಿಎಂ ಆಗಿ, ಹತ್ತು ಹಲವು ಜನಪರ ಕೆಲಸ ಮಾಡಿರುವ ಕುಮಾರಸ್ವಾಮಿ ವಿರುದ್ಧ ನಾಲಗೆ ಹರಿಯಬಿಟ್ಟಿರುವುದು ಸರಿಯಲ್ಲ. ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ದುರ್ನಡತೆ ತೋರುವ ಮೂಲಕ ನಿಯಮ ಉಲ್ಲಂಘನೆ ಮಾಡಿರುವ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪರ ವಿಪಕ್ಷ ನಾಯಕರ ವಿರುದ್ಧ ಮಾತಾನಾಡಲು ಕಳಂಕಿತ ಅಧಿಕಾರಿಯನ್ನು ರಾಜ್ಯ ಸರ್ಕಾರ ಬಿಟ್ಟಿದೆಯೇ ಎಂಬ ಅನುಮಾನ ಮೂಡುತ್ತದೆ. ಚಂದ್ರಶೇಖರ್ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಕೀಳುಮಟ್ಟದ ಅಭಿರುಚಿ ಪ್ರದರ್ಶಿಸಿದ್ದರೂ, ಸಿಎಂ ಕೂಡ ಸಮರ್ಥನೆ ಮಾಡಿಕೊಂಡಿರುವುದು ವಿಷಾದನೀಯ ಎಂದರು.
ಶಾಸಕ ಹೆಚ್.ಪಿ.ಸ್ವರೂಪ್ ಮಾತನಾಡಿ, ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ಇದೇ ರೀತಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್, ಎನ್.ಆರ್.ಸಂತೋಷ್ ಮಾತನಾಡಿದರು. ನಂತರ ಜಿಲ್ಲಾಡಳಿತದ ಮೂಲಕ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಎಸ್.ರಘುಗೌಡ, ಜೆಡಿಎಸ್ ವಕ್ತಾರ ಹೊಂಗೆರೆ ರಘು, ಎಸ್.ದ್ಯಾವೇಗೌಡ, ದೇವರಾಜೇಗೌಡ, ಮಂಜೇಗೌಡ, ಬೈಲಹಳ್ಳಿ ಸತ್ಯನಾರಾಯಣ, ಲಕ್ಷ್ಮೇಗೌಡ, ಗಿರೀಶ್ ಚನ್ನವೀರಪ್ಪ ಮೊದಲಾದವರಿದ್ದರು.
ಸಿಎಂ ರಾಜೀನಾಮೆ ನೀಡಲಿ
ಅರಕಲಗೂಡು ಶಾಸಕ ಎ.ಮಂಜು ಮಾತನಾಡಿ, ಎಡಿಜಿಪಿಗೆ ಅಧಿಕಾರ ನೀಡಿರುವುದು ತನಿಖೆ ಮಾಡುವುದಕ್ಕಷ್ಟೆ. ಅದನ್ನು ಮಾಡಲಿ, ಎಲ್ಲೆ ಮೀರಿ ಪತ್ರ ಬರೆದು ಹಂದಿ ಪದ ಬಳಕೆ ಮಾಡಿರುವುದು ಖಂಡನೀಯ, ಈ ಪದ ಕೇವಲ ಕುಮಾರಸ್ವಾಮಿ ಅವರಿಗೆ ಅಷ್ಟೇ ಅಲ್ಲ, ಕಾಂಗ್ರೆಸ್‌ನವರಿಗೂ ಅನ್ವಯ ಆಗಲಿದೆ. ಯಾರಿಗೆ ಅಂದರೂ ಒಂದೇ. ಏಕೆಂದರೆ ನಾವೆಲ್ಲರೂ ಶಾಸಕಾಂಗದ ಪ್ರತಿನಿಧಿಗಳು. ಎಫ್‌ಐಆರ್ ಆದ ಮೇಲೆ ಜವಾಬ್ದಾರಿ ಸ್ಥಾನದಲ್ಲಿರದೆ ನೈತಿಕತೆಯಿಂದ ಸಿಎಂ ರಾಜೀನಾಮೆ ನೀಡಿ ತನಿಖೆಗೆ ಸಹಕಾರ ಕೊಡಲಿ, ಶಂಕರ ಬಿದಿರಿ ಪ್ರಕರಣವನ್ನು ಸಿಎಂ ನೆನಪಿಸಿಕೊಳ್ಳಲಿ ಎಂದರು.
ನಮ್ಮ ಪ್ರತಿಭಟನೆ ಪೊಲೀಸ್ ಇಲಾಖೆ ವಿರುದ್ಧವಲ್ಲ
ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಬಾಲಕೃಷ್ಣ ಮಾತನಾಡಿ, ನಮ್ಮ ಪ್ರತಿಭಟನೆ ಪೊಲೀಸ್ ಇಲಾಖೆ ವಿರುದ್ಧ ಅಲ್ಲ, ಚಂದ್ರಶೇಖರ್ ವಿರುದ್ಧ. ಈ ಹೇಳಿಕೆ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗ ಆಗಬೇಕು. ಅವರು ರಾಜಕೀಯ ಮಾಡಬೇಕಿದ್ದರೆ ಖಾಕಿ ಕಳಚಿ ಬರಲಿ, ಕುಮಾರಸ್ವಾಮಿ ಬಗ್ಗೆ ಮಾತಾಡಲು ಯೋಗ್ಯತೆ ಇರಬೇಕು. ವೈಯಕ್ತಿಕ ಟೀಕೆ ವರ್ತನೆ ಸರಿಯಲ್ಲ, ಇಂಥ ಅಧಿಕಾರಿಗಳು ಬೇಕೇ ಎಂಬುದನ್ನು ಸರ್ಕಾರ ತೀರ್ಮಾನ ಮಾಡಿ ಕೂಡಲೇ ಎಡಿಜಿಪಿಯನ್ನು ರಾಜ್ಯ ಸರ್ಕಾರ ವಜಾಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.