

ಕೆ.ಆರ್.ಪೇಟೆ: ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಒಳಮೀಸಲಾತಿಯನ್ನು ಸರ್ಕಾರ ತಕ್ಷಣ ಜಾರಿಗೊಳಿಸಬೇಕು. ಒಳ ಮೀಸಲಾತಿ ಜಾರಿಗೊಳಿಸುವತನಕ ಬ್ಯಾಕ್‌ಲಾಗ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಬಾರದು ಎಂದು ಮಂಡ್ಯ ಜಿಲ್ಲಾ ಅಖಿಲ ಕರ್ನಾಟಕ ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟವು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ತಾಲೂಕು ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ಚಂದ್ರಶೇಖರ್, ಪರಿಶಿಷ್ಟ ಜಾತಿಯಲ್ಲಿ ಈವರೆಗೆ ಎಡಗೈ ಸಮುದಾಯದ ಮಾದಿಗ, ಆದಿ ದ್ರಾವಿಡ, ಆದಿ ಜಾಂಬವ ಸಮುದಾಯ ಸರ್ಕಾರಿ ಉದ್ಯೋಗ, ರಾಜಕೀಯ, ಸಾಮಾಜಿಕ, ಆರ್ಥಿಕ ಅವಕಾಶಗಳಿಂದ ವಂಚಿತವಾಗಿದೆ. ಇತರೆ ಸಮುದಾಯಗಳಿಗೆ ಒಳಮೀಸಲಾತಿ ನೀಡಬಹುದು ಎಂದು ಸುಪ್ರಿಂಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥಾವತ್ ಜಾರಿಗೊಳಿಸಬೇಕು ಎಂದರು.
ಸರ್ಕಾರವು ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗ ರಚಿಸಿದೆ. ಈ ಆಯೋಗವು ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಯ ಸರ್ಕಾರಿ ನೌಕರರು ತಮ್ಮ ಮೂಲ ಜಾತಿಯ ಮಾಹಿತಿಯನ್ನು ಅಂದರೆ ಬಲಗೈ (ಹೊಲೆಯ) ಅಥವಾ ಎಡಗೈ (ಮಾದಿಗ) ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಿ ನೌಕರರಿಗೆ ಮನವಿ ಮಾಡಿದೆ. ಕೂಡಲೇ ರಾಜ್ಯ ಸರ್ಕಾರ ಈ ಬಗ್ಗೆ ಪ.ಜಾತಿ ಸರ್ಕಾರಿ ನೌಕರರಿಂದ ಮಾಹಿತಿ ಸಂಗ್ರಹಿಸಿ ಒಳಮೀಸಲಾತಿ ಜಾರಿಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬಾರದು ಎಂದು ಒತ್ತಾಯಿಸಿದರು.
30 ವರ್ಷಗಳ ಹೋರಾಟದ ಫಲವಾಗಿ ಒಳಮೀಸಲಾತಿ ನೀಡಬಹುದೆಂದು ಸುಪ್ರಿಂಕೋರ್ಟ್ ತೀರ್ಪು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಜಾರಿಗೊಳಿಸುವ ನಂಬಿಕೆಯನ್ನು ಮಾದಿಗ ಸಮುದಾಯ ಹೊಂದಿದೆ. ಜಿಲ್ಲೆಯಲ್ಲಿ ಮಾದಿಗ ಸಮುದಾಯಕ್ಕೆ ಜಾತಿ ದೃಢೀಕರಣ ಪತ್ರವನ್ನು ತಾಲೂಕು ಕಚೇರಿಗಳಲ್ಲಿ ನೀಡುತ್ತಿಲ್ಲ. ಇದರಿಂದ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ತಾಲೂಕು ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ಎಂ.ಪುಟ್ಟರಾಜು, ಕಾರ್ಯದರ್ಶಿ ಕಾಂತರಾಜು, ಪದಾಧಿಕಾರಿಗಳಾದ ಆರ್.ಟಿ.ಉಮೇಶ್, ಗೋಪಿನಾಥ್, ಆರ್.ಸುಧಾಕರ್, ಎಚ್.ಆರ್.ರಮೇಶ್, ನಿವೃತ್ತ ಸೈನಿಕ ಜಯರಾಂ, ಕೃಷ್ಣಪ್ಪ, ಮಂಜು, ನಂಜುಂಡಸ್ವಾಮಿ, ಸುರೇಶ್, ಗೋವಿಂದರಾಜು, ಕದಿರಯ್ಯ, ರಾಜು ಉಪಸ್ಥಿತರಿದ್ದರು.