ಎಟಿಎಂ ಯಂತ್ರ ಒಡೆದು ಹಣ ಕಳವು ಯತ್ನ

Published on

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಎಟಿಎಂ ಕೇಂದ್ರದ ಯಂತ್ರವನ್ನು ಒಡೆದು ಹಣವನ್ನು ಕಳವು ಮಾಡುವ ಯತ್ನ ನಡೆದಿದೆ.


ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತೆ ಎಸ್ ಬಿ ಐ ಬ್ಯಾಂಕ್ ಶಾಖೆ ಮತ್ತು ಎಟಿಎಂ ಕೇಂದ್ರ ಇದೆ‌. ಎರಡು ಯಂತ್ರಗಳನ್ನು ಹೊಂದಿದ್ದು ಶನಿವಾರ ಬೆಳಗಿನ ಜಾವ ಒಂದರಲ್ಲಿ ಕಳ್ಳತನ ಮಾಡಲು ಖದೀಮರು ಯತ್ನಿಸಿದ್ದಾರೆ.


ಇದಕ್ಕೂ ಮೊದಲು ಶಾಖೆಯ ಮುಂಭಾಗದ ವಿದ್ಯುತ್ ದೀಪಗಳ ವೈರ್ ಗಳನ್ನು ಕಟ್ ಮಾಡಿದ್ದಾರೆ. ಜತೆಗೆ ಸಿಸಿ ಕ್ಯಾಮರಾವನ್ನು ಮತ್ತೊಂದು ಕಡೆಗೆ ತಿರುಗಿಸಿದ್ದಾರೆ ನಂತರ ಎಟಿಎಂ ಒಳಗಿನ ಕ್ಯಾಮರಾಗಳನ್ನು ಕಿತ್ತುಹಾಕಿದ್ದಾರೆ.


ಯಂತ್ರದ ಮುಂಭಾಗದ ಕವಚನ್ನು(ಬಾಗಿಲು) ಕಿತ್ತು ಹಾಕಿದ್ದು ಆದರೆ ಇನ್ನೊಂದು ಕವಚ ತೆರೆಯಲಾಗದೆ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ. ಯಂತ್ರದ ಬಾಗಿಲು ಜಖಂಗೊಂಡಿದ್ದು ಬಾಂಬೆಯಿಂದ ತಜ್ಞರು ಬಂದು ಅದನ್ನು ಸರಿಪಡಿಸಿದಾಗ ಪೂರ್ಣ ಮಾಹಿತಿ ಸಿಗಲಿದೆ. ಹಣವನ್ನು ಕಳ್ಳತನ ಮಾಡಲು ಯಂತ್ರಕ್ಕೆ ಹಾನಿ ಮಾಡಿದ್ದಾರೆ ಆದರೆ ಹಣ ಕಳ್ಳರಿಗೆ ಸಿಕ್ಕಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ಹಿರೀಸಾವೆ ಠಾಣೆಯ ಸಿಪಿಐ ಭಾನು ತಿಳಿಸಿದರು.


ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಎಸ್‌ಬಿಐನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net