ಎಟಿಎಂ ಕೇಂದ್ರಕ್ಕೆ ಬೆಂಕಿ, ಅಪಾರ ಹಾನಿ

28 KRN-4
ಕೆ.ಆರ್.ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕರ್ಣಾಟಕ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಬೆಂಕಿ ಬಿದ್ದು ಸುಟ್ಟು ಕರಕಲಾಗಿದೆ
Published on

ಕೆ.ಆರ್.ನಗರ: ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿದ್ದ ಕರ್ಣಾಟಕ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಶುಕ್ರವಾರ ಬೆಂಕಿ ತಗುಲಿ ಯಂತ್ರ, ಅದರಲ್ಲಿದ್ದ ಹಣ ಹಾಗೂ ಹವಾನಿಯಂತ್ರಿತ ಪರಿಕರಗಳು ಸಂಪೂರ್ಣ ಸುಟ್ಟುಹೋಗಿವೆ.

ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ವಿದ್ಯುತ್ ಅವಘಡದಿಂದ ಅಥವಾ ಹವಾನಿಯಂತ್ರಿತ ಮಷಿನ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ.

ನವೀಕರಣಗೊಂಡಿದ್ದ ಬಸ್ ನಿಲ್ದಾಣದಲ್ಲಿ ಹಲವಾರು ಮಳಿಗೆಗಳಿವೆ. ಕರ್ಣಾಟಕ ಬ್ಯಾಂಕ್ ಸೇರಿದಂತೆ ಇತರ ಮೂರು ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳಿವೆ. ಅಲ್ಲದೆ, ಕಂಪ್ಯೂಟರ್ ಸೆಂಟರ್ ಸೇರಿದಂತೆ ಹಲವು ವಾಣಿಜ್ಯ ಮಳಿಗೆಗಳಿವೆ. ಅಗ್ನಿಶಾಮಕ ಠಾಣೆ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಅಷ್ಟರಾಗಲೇ ಎಟಿಎಂ ಕೇಂದ್ರ ಶೇ.90ರಷ್ಟು ಹಾನಿಗೊಂಡಿತ್ತು. ಆದರೆ ಅಕ್ಕಪಕ್ಕದ ಮಳಿಗೆಗಳಿಗೆ ಬೆಂಕಿ ವ್ಯಾಪಿಸದಂತೆ ತಡೆಗಟ್ಟಲಾಯಿತು.

ಪ್ರಯಾಣಿಕರ ಪರದಾಟ:ಎಟಿಎಂ ಕೇಂದ್ರ ಸಮೀಪ ಜೇನುಗೂಡು ಕಟ್ಟಿತ್ತು. ಕೇಂದ್ರಕ್ಕೆ ಬೆಂಕಿ ಬಿದ್ದ ಕೂಡಲೇ ನಿಲ್ದಾಣ ತುಂಬೆಲ್ಲ ಹೊಗೆ ಆವರಿಸಿದ ಪರಿಣಾಮ ಜೇನುಹುಳುಗಳು ಗೂಡಿನಿಂದ ಹೊರಬಂದವು. ಅದರ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯಾಣಿಕರು ಹರಸಾಹಸಪಟ್ಟರು. ನಿಲ್ದಾಣದ ಎರಡು ಬದಿಯಲ್ಲೂ ವಿವಿಧ ಮಾರ್ಗಗಳಿಗೆ ತೆರಳಲು ನಿಂತಿದ್ದ ಹತ್ತಾರು ಬಸ್‌ಗಳನ್ನು ಕೂಡಲೇ ಹೊರಕಳುಹಿಸಲಾಯಿತು.

ಪೊಲೀಸರು ನಿಲ್ದಾಣದ ಎರಡು ಬದಿಯಲ್ಲೂ ನಿಂತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ ಬಸ್‌ಗಳ ಮಾರ್ಗ ಬದಲಾವಣೆ ಮಾಡಿ ಕಳುಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net