

ಮೂಡಿಗೆರೆ: ಬೇಲೂರಿನ ಆಸ್ಪತ್ರೆಗೆ ತೆರಳಿದ್ದ ತಾಲೂಕಿನ ಉದುಸೆ ಗ್ರಾಮದ ಮಹಿಳೆ ಎಟಿಎಂನಿಂದ ಹಣ ಡ್ರಾ ಮಾಡಲು ಬರದಿದ್ದರಿಂದ ಅಪರಿಚಿತನಿಗೆ ಹಣ ಡ್ರಾ ಮಾಡಿಕೊಡಲು ಹೇಳಿ ಎಟಿಎಂ ಕಾರ್ಡ್ ನೀಡಿದಾಗ ಮಹಿಳೆಗೆ ನಕಲಿ ಎಟಿಎಂ ಕಾರ್ಡ್ ಬದಲಾಯಿಸಿ ನೀಡಿ ಬ್ಯಾಂಕ್ ಖಾತೆಯಲ್ಲಿದ್ದ ಹಣ ಡ್ರಾ ಮಾಡಿ ವಂಚಿಸಿದ್ದಾನೆ.
ಬುಧವಾರ ಉದುಸೆ ಗ್ರಾಮದ ಪವಿತ್ರಾ ಎಂಬುವರು ಮಗುವಿನೊಂದಿಗೆ ಬೇಲೂರಿನ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ಅವರಿಗೆ ತುರ್ತಾಗಿ ಹಣದ ಅವಶ್ಯಕತೆ ಇದ್ದಿದ್ದರಿಂದ ಪಕ್ಕದ ಎಟಿಎಂಗೆ ತೆರಳಿ ಹಣ ಬಿಡಿಸಿಕೊಳ್ಳಲು ಮುಂದಾಗಿದ್ದಾರೆ. ಹಣ ಡ್ರಾ ಮಾಡಿಕೊಳ್ಳಲು ಅವರಿಂದಾಗಲಿಲ್ಲ. ಆಗ ಎಟಿಎಂ ಹೊರಭಾಗದಲ್ಲಿ ನಿಂತಿದ್ದ ಅಪರಿಚಿತನನ್ನು ನೋಡಿದ ಪವಿತ್ರಾ, ಎಟಿಎಂ ಕಾರ್ಡ್ ಆತನ ಕೈಗೆ ನೀಡಿ ಹಣ ಡ್ರಾ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಎಟಿಎಂನಿಂದ ಹಣ ಡ್ರಾ ಮಾಡುವಂತೆ ನಟಿಸಿದ ಅಪರಿಚಿತ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂದು ಹೇಳಿ ಪವಿತ್ರಾ ಅವರ ಅರಿವಿಗೆ ಬಾರದಂತೆ ನಕಲಿ ಎಟಿಎಂ ಕಾರ್ಡ್ ನೀಡಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಅಪರಿಚಿತನ ಮಾತನ್ನು ನಂಬಿದ ಪವಿತ್ರಾ ಎಟಿಎಂನಿಂದ ಹೊರ ಹೋಗಿದ್ದಾರೆ. ನಂತರ ಆಟೋದಲ್ಲಿ ಕುಳಿತು ಎಟಿಎಂ ಕಾರ್ಡ್ ನೋಡಿದಾಗ ಬೇರೆ ಕಾರ್ಡ್ ನೀಡಿರುವುದು ತಿಳಿದುಬಂದಿದೆ.
ಪವಿತ್ರಾ ಕೊಟ್ಟಿದ್ದ ಎಟಿಎಂ ಕಾರ್ಡ್‌ನಲ್ಲಿ ಪಿನ್‌ಕೋಡ್ ಬರೆದಿದ್ದರು. ವಂಚಕ ಕೊಟ್ಟಿದ್ದ ನಕಲಿ ಕಾರ್ಡ್‌ನಲ್ಲಿ ಪಿನ್ ನಂಬರ್ ಬರವಣಿಗೆ ಇಲ್ಲದಿದ್ದರಿಂದ ಮಹಿಳೆ ಗಲಿಬಿಲಿಕೊಂಡಿದ್ದಾರೆ. ಕೂಡಲೆ ಅಳಿಯನಿಗೆ ಮೊಬೈಲ್ ಕರೆ ಮಾಡಿ ವಿಚಾರ ತಿಳಿಸಿದರು. ಆಗ ಬ್ಯಾಂಕಿಗೆ ತೆರಳಿ ಖಾತೆಯನ್ನು ಲಾಕ್ ಮಾಡಿಸಿ, ಪೊಲೀಸರಿಗೆ ದೂರು ನೀಡುವಂತೆ ಪವಿತ್ರಾ ಅವರಿಗೆ ಅಳಿಯ ತಿಳಿಸಿದ್ದಾರೆ.
ಪವಿತ್ರಾ ಅವರಿಗೆ ಎಟಿಎಂ ನಕಲಿ ಕಾರ್ಡ್ ನೀಡಿ ಹೋಗಿದ್ದ ವಂಚಕ ಹಾಸನಕ್ಕೆ ತೆರಳಿ ಅಲ್ಲಿ ಮಹಿಳೆಯ ಎಟಿಎಂ ಕಾರ್ಡ್ ಬಳಸಿ 18 ಸಾವಿರ ರೂಪಾಯಿ ಡ್ರಾ ಮಾಡಿಕೊಂಡಿದ್ದಾನೆ. ಇತ್ತ ಪವಿತ್ರಾ ಅವರು ಬ್ಯಾಂಕಿಗೆ ತೆರಳಿ ನೋಡಿದಾಗ ಹಣ ಡ್ರಾ ಆಗಿರುವುದು ಗೊತ್ತಾಗಿದೆ. ಪವಿತ್ರಾ ಬೇಲೂರು ಪೊಲೀಸರಿಗೆ ದೂರು ನೀಡಿದ್ದಾರೆ. ಬ್ಯಾಂಕ್ ಖಾತೆಯನ್ನು ಲಾಕ್ ಮಾಡಿಸಿದ್ದಾರೆ. ಅವರ ಖಾತೆಯಲ್ಲಿ 31 ಸಾವಿರ ರೂಪಾಯಿ ಇತ್ತು.
ಕೂಲಿ ಮಾಡಿ ಜೀವನ ನಡೆಸುತ್ತಿರುವ ಪವಿತ್ರಾ ಅಲ್ಪಸ್ವಲ್ಪ ಹಣ ಉಳಿಸಿ ಬ್ಯಾಂಕ್ ಖಾತೆಯಲ್ಲಿರಿಸಿದ್ದರು. ಅದು ಈಗ ಕಳ್ಳನ ಪಾಲಾಗಿರುವುದರಿಂದ ಆತಂಕದಲ್ಲಿದ್ದಾರೆ. ಪೊಲೀಸರು ಸಿಸಿಟಿವಿ ಕ್ಯಾಮರಾ ದೃಶ್ಯವನ್ನು ಪರಿಶೀಲಿಸಿದಾಗ, ಅಪರಿಚಿತ ನಕಲಿ ಕಾರ್ಡ್ ನೀಡಿ ವಂಚಿಸಿರುವ ದೃಶ್ಯ ಸೆರೆಯಾಗಿದೆ.