ಎಜುಕೇಟೆಡ್ ಸರಗಳ್ಳನ ಬಂಧನ.

ಎಜುಕೇಟೆಡ್ ಸರಗಳ್ಳನ ಬಂಧನ.
Published on

ಹಾಸನ: ಕಳೆದ ಕೆಲ ತಿಂಗಳುಗಳಿಂದ ಜಿಲ್ಲೆಯಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಶಾಂತಿಗ್ರಾಮ ಠಾಣೆ ಪೊಲೀಸರು ಬಂಧಿಸಿದ್ದು, ಏಳು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.

ಭಾರತ್ ಫೈನಾನ್ಸ್ ಸಂಸ್ಥೆಯಲ್ಲಿ ಫೀಲ್ಡ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೈಸೂರು ಜಿಲ್ಲೆ ಮುಂಡೂರು ಗ್ರಾಮದವನಾದ, ಹಾಲಿ ಹೊಳೆನರಸೀಪುರ ನಿವಾಸಿ ಅಭಿಷೇಕ್ (26) ಬಂಧಿತ ಆರೋಪಿ. ಆತನಿಂದ ಸುಮಾರು 6.5 ಲಕ್ಷ ರೂ. ಮೌಲ್ಯದ 135 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೋಮವಾರ ಎಸ್ಪಿ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.


ಕಳೆದ ಸೆ.11ರ ಸಂಜೆ 4.15ರ ಸುಮಾರಿಗೆ ಗೊರೂರು ಗ್ರಾಮದ ಚೇತನ ಕಾನ್ವೆಂಟ್ ಬಳಿ ಮಹಿಳೆಯೊಬ್ಬರು ಅಂಗಡಿಗೆ ಹೋಗುವ ವೇಳೆ ಹಿಂದಿನಿಂದ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ 80 ಸಾವಿರ ರೂ. ಬೆಲೆಯ 21 ಗ್ರಾಂ ತೂಕದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ. ಈ ಸಂಬಂಧ ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.


ವಿಶೇಷ ತಂಡ ರಚನೆ:
ಸರಗಳ್ಳನ ಪತ್ತೆಗೆ ಎಎಸ್ಪಿ ಕೆ.ಎಂ. ತಮ್ಮಯ್ಯ ಮತ್ತು ಡಿವೈಎಸ್ಪಿ ಜಿ.ವಿ.ಉದಯಭಾಸ್ಕರ್ ಅವರ ಮಾರ್ಗದರ್ಶನದಲ್ಲಿ ಶಾಂತಿಗ್ರಾಮ ಠಾಣೆ ಸಿಪಿಐ ಪಿ. ಸುರೇಶ್, ಗೊರೂರು ಠಾಣೆ ಪಿಎಸ್‌ಐ ಅಜಯ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ತಂಡ ಖಚಿತ ಮಾಹಿತಿ ಮೇರೆಗೆ ಅ.2 ರಂದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹಲವು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿ ಆಗಿರುವುದಾಗಿ ಬಾಯಿಬಿಟ್ಟಿದ್ದಾನೆ.

ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ 12 ಸರಗಳ್ಳತನ ಪ್ರಕರಣಗಳು ನಡೆದಿವೆ. ಇದರಲ್ಲಿ ಆರೋಪಿ ಅಭಿಷೇಕ್ ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಗೊರೂರು, ಹೊಳೆನರಸೀಪುರ, ಅರಕಲಗೂಡು, ಕೊಣನೂರು ಮತ್ತು ದುದ್ದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತ ಸರಗಳ್ಳತನ ಮಾಡಿದ್ದಾನೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಆಧಾರದ ಮೇಲೆ ಹಾಗೂ ಮೊಬೈಲ್ ನಂಬರ್ ಟ್ರ್ಯಾಕಿಂಗ್ ಮೂಲಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಭಾನುವಾರದ ಕಳ್ಳ:
ಆರೋಪಿ ಅಭಿಷೇಕ್ ಫೈನಾನ್ಸ್ ಸಂಸ್ಥೆಯಲ್ಲಿ ಕೆಲಸದಲ್ಲಿದ್ದರೂ ಆನ್‌ಲೈನ್ ಗೇಮ್‌ಗಳ ವ್ಯಸನಕ್ಕೆ ಸಿಲುಕಿ ಸಾಕಷ್ಟು ಹಣ ಕಳೆದುಕೊಂಡಿದ್ದ. ಸುಲಭವಾಗಿ ಹಣ ಗಳಿಸಲು ರಜಾದಿನವಾದ ಭಾನುವಾರ ಈತ ವಯಸ್ಸಾದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ. ಮುಖ ಮುಚ್ಚುವಂತೆ ಹೆಲ್ಮೆಟ್ ಧರಿಸಿಕೊಂಡು ಮಹಿಳೆಯರ ಕೊರಳಿಗೆ ಕೈ ಹಾಕಿ ಸರ ಕಿತ್ತು ಬೈಕ್‌ನಲ್ಲಿ ಪರಾರಿ ಆಗುತ್ತಿದ್ದ ಎಂದು ಎಸ್ಪಿ ತಿಳಿಸಿದರು.

ಏಳು ಸರಗಳ್ಳತನ ಪ್ರಕರಣಗಳನ್ನು ಭೇದಿಸಿದ ಶಾಂತಿಗ್ರಾಮ ಠಾಣೆ ಸಿಪಿಐ ಸುರೇಶ್ ಮತ್ತು ಸಿಬ್ಬಂದಿಗಳ ತಂಡಕ್ಕೆ 5 ಸಾವಿರ ರೂ. ಬಹುಮಾನ ಘೋಷಿಸಿರುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net