ಮೈಸೂರು: ಭಾರತೀಯ ನಗರ ಅನಿಲ ವಿತರಣೆ (ಸಿಜಿಡಿ) ಉದ್ಯಮದಲ್ಲಿ ಪ್ರಮುಖ ಸಂಸ್ಥೆಯಾಗಿರುವ ಎಜಿಪಿ ಪ್ರಥಮ್, ಮೈಸೂರು ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಅನಿಲ ವಿತರಣೆ ಜಾಲ ಅಭಿವೃದ್ಧಿಪಡಿಸಲು 8 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದೆ ಬಂದಿದೆ.
ಬೆಂಗಳೂರಿನಲ್ಲಿ ಆರಂಭಗೊಂಡಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಈ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಕರ್ನಾಟಕದ 15 ಜಿಲ್ಲೆಗಳಲ್ಲಿ ವಿಶ್ವಾಸಾರ್ಹ, ಆರ್ಥಿಕತೆ ಮತ್ತು ಪರಿಸರ ಸ್ನೇಹಿಯಾದ ನ್ಯಾಚುರಲ್ ಗ್ಯಾಸ್ ವಿತರಣೆ ಮಾಡವ ಮೂಲಕ ನಗರ ಅನಿಲ ವಿತರಣೆ (ಸಿಜಿಡಿ) ಜಾಲ ಅಭಿವೃದ್ಧಿಪಡಿಸುವ ಕಾರ್ಯ ಕೈಗೊಳ್ಳಲಿದೆ.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ಕೋಲಾರ, ಚಿಕ್ಕಮಗಳೂರು, ಬಾಗಲಕೋಟೆ, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಶಿವಮೊಗ್ಗ, ಉತ್ತರಕನ್ನಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮುಂದಿನ ಎಂಟು ವರ್ಷಗಳಲ್ಲಿ ಸಿಜಿಡಿ ಜಾಲಗಳನ್ನು ಅಭಿವೃದ್ಧಿಪಡಿಸಲು 8 ಸಾವಿರ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ.
ಸುಮಾರು 1000 ಕಿಲೋ ಮೀಟರ್‌ನಷ್ಟು ಪೈಪ್‌ಲೈನ್, 5000 ಕಿ.ಮೀ.ನಷ್ಟು ಎಂಡಿಪಿಇ ಪೈಪ್‌ಲೈನ್ ಅಳವಡಿಸಿ, ಇದರ ಮೂಲಕ 5 ಮಿಲಿಯನ್‌ಗೂ ಅಧಿಕ ಮನೆಗಳು ಮತ್ತು ಅನೇಕ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳಿಗೆ ನೈಸರ್ಗಿಕ ಅನಿಲವನ್ನು ಪೂರೈಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದಲ್ಲದೆ, ಸಾರಿಗೆ ಕ್ಷೇತ್ರಕ್ಕಾಗಿ 600ಕ್ಕೂ ಹೆಚ್ಚು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಸ್ಟೇಷನ್‌ಗಳು ಮತ್ತು ಲಿಕ್ವಿಫೈಯ್ಡ್ ನ್ಯಾಚುರಲ್ ಗ್ಯಾಸ್ ಸ್ಟೇಷನ್ ಆರಂಭಿಸುವ ಯೋಜನೆಯನ್ನು ಹೊಂದಿದೆ. ಇದರಿಂದ ಸುಮಾರು 5 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ.
ಮೈಸೂರು ನಗರದಲ್ಲಿ ಈಗಾಗಲೇ 200 ಕಿ.ಮೀ.ನಷ್ಟು ಸ್ಟೀಲ್ ಪೈಪ್ ಲೈನ್ ಅಭಿವೃದ್ಧಿಪಡಿಸಿದ್ದು, ಇದರ ಮೂಲಕ ಮನೆಗಳಿಗೆ ಮತ್ತು ಕೈಗಾರಿಕೆಗಳಿಗೆ ಅನಿಲ ಸಂಪರ್ಕ ಕಲ್ಪಿಸಿದೆ. ಇದುವರೆಗೆ ಎಜಿಪಿ ಪ್ರಥಮ್ ರಾಜ್ಯದಲ್ಲಿ 60 ಸಿಎನ್‌ಜಿ/ಎಲ್ಎನ್‌ಜಿ ಸ್ಟೇಷನ್‌ಗಳನ್ನು ಆರಂಭಿಸಿದ್ದು, ಇನ್ನೂ ಅನೇಕ ಸ್ಟೇಷನ್‌ಗಳ ನಿರ್ಮಾಣ ಪ್ರಗತಿಯಲ್ಲಿದೆ. ಸಾರ್ವಜನಿಕರಿಗೆ ಶುದ್ಧ ಮತ್ತು ಹಸಿರು ಇಂಧನವನ್ನು ಒದಗಿಸುವ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಸರ್ಕಾರದ ಹಿತಾಸಕ್ತಿಗೆ ಅನುಗುಣವಾಗಿ ನಮ್ಮ ನಿರಂತರ ಪ್ರಯತ್ನಗಳಿಗೆ ಈ ಒಪ್ಪಂದ ಸಾಕ್ಷಿಯಾಗಿದೆ ಎಂದು ಎಂದು ಎಜಿಪಿ ಪ್ರಥಮ್‌ನ ವ್ಯವಸ್ಥಾಪಕ ನಿರ್ದೇಶಕ ಅಭಿಲೇಶ್ ಗುಪ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.