ಎಚ್‌ಐವಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿ: ವೆಂಕಣ್ಣ ಹೊಸಮನಿ

hn 1-2
Published on

ವಿಜಯಪುರ : ಎಚ್‌ಐವಿ ಸೋಂಕಿತರಿಗೆ ಸಮುದಾಯಗಳಲ್ಲಿ ಬೆಂಬಲ ಸಿಗುತ್ತಿರಲಿಲ್ಲ, ಆದ್ದರಿಂದ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಹೊಸಮನಿ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಸಭಾ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ, ಸ್ವಯಂ ಸೇವಾ ಸಂಸ್ಥೆಗಳು, ಎನ್‌ಎಸ್‌ಎಸ್ ಘಟಕಗಳು, ರೆಡ್ ರಿಬ್ಬನ್ ಕ್ಲಬ್‌ಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಇಳಿಮುಖಗೊಳ್ಳುತ್ತಿದೆ. ಸೊಂಕಿತರಿಗೆ ಕೋವಿಡ್ ಬಾರದಂತೆ ಮುನ್ನೆಚರಿಕೆ ಕ್ರಮಗಳನ್ನು ವಹಿಸಿ ಅವರ ಮನೆ ಬಾಗಿಲಿಗೆ ಮಾತ್ರೆಗಳನ್ನು ತಲುಪಿಸಿರುವುದರಿಂದ ಎಚ್‌ಐವಿ ಸೋಂಕಿತರು ಕೋವಿಡ್-19ನಿಂದ ದೂರವಿರಲು ಸಾಧ್ಯವಾಗಿದೆ. ತುಳಿತ್ತಕ್ಕೊಳಗಾದ ಸಮುದಾಯದ ಜತೆಗೆ ಕೆಲಸ ಮಾಡಲು ಕಾನೂನು ಸೇವಾ ಪ್ರಾಧಿಕಾರ ಕೈಜೋಡಿಸಲಿದೆ ಎಂದರು.
ಜಿಲ್ಲಾ ಏಡ್ಸ್/ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಈರಣ್ಣ ಧಾರವಾಡಕರ ಮಾತನಾಡಿ, ಜಿಲ್ಲೆಯಲ್ಲಿ 18 ಐಸಿಟಿಸಿ ಕೇಂದ್ರಗಳು, 4 ಎಆರ್‌ಟಿ ಕೇಂದ್ರಗಳು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಎಚ್‌ಐವಿ/ಏಡ್ಸ್ ನಿಯಂತ್ರಣದಲ್ಲಿ ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ. ಅದರಲ್ಲಿ ಅತ್ಯುತ್ತಮ ಸೇವೆ ನೀಡುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮಹೇಂದ್ರ ಕಾಪ್ಸೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಟಿಯೋಲ್ ಾದರ್, ಸಾಮಾಜಿಕ ಹೋರಾಟಗಾರ ಪೀಟರ್ ಅಲೆಗ್ಸಾಂಡರ್, ಡಾ.ಜೇಬುನ್ನಿಸಾ ಬೇಗಂ, ಡಾ.ಎಸ್.ಎಸ್.ಗುಣಾರಿ, ಡಾ.ಸುಮಾ ಮಮದಾಪುರ, ಗಂಗಯ್ಯ ಹಿರೇಮಠ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net