

ಬೆಂಗಳೂರು ಗ್ರಾಮಾಂತರ: ಎಚ್‌ಐವಿ ಬಾಧಿತರಿಗೆ ಸರ್ಕಾರದಿಂದ ವೈದ್ಯಕೀಯ ತಪಾಸಣೆ ಮತ್ತು ಔಷಧ ಸೌಲಭ್ಯಗಳು ಉಚಿತವಾಗಿದ್ದು, ಹಿಂಜರಿಕೆ ಪಡೆದೆ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಆರೋಗ್ಯಕರ ಜೀವನ ನಡೆಸಬೇಕು ಎಂದು ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ ಯೋಜನಾ ನಿರ್ದೇಶಕಿ ಕೆ.ಲೀಲಾವತಿ ಕಿವಿಮಾತು ಹೇಳಿದರು.
ದೇವನಹಳ್ಳಿಯ ಜಿಪಂ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಮಾತನಾಡಿದರು.
ಏಡ್ಸ್ ಬಾಧಿತರು ತೆಗದುಕೊಳ್ಳಬೇಕಾದ ಕ್ರಮ ಹಾಗೂ ಸೋಂಕು ಹರಡದಂತೆ ತಡೆಯುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ. ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಂಡು ಆರೋಗ್ಯಕರ ಜೀವನ ನಡೆಸುವಂತೆ ತಿಳಿ ಹೇಳಬೇಕು, ಸಮಾಜದಲ್ಲಿ ಬಾಧಿತ ವ್ಯಕ್ತಿ ತಾರತಮ್ಯಕ್ಕೆ ಒಳಪಟ್ಟರೆ ಅಂಥವರು ಕಾನೂನು ನೆರವು ಪಡೆಯಬಹುದುದಾಗಿದೆ ಎಂದು ಸಲಹೆ ನೀಡಿದರು.
ಅರಿವು ಮೂಡಿಸಬೇಕು: ಸೋಂಕಿತರು ಯಾವುದೇ ಭಯವಿಲ್ಲದೇ ಚಿಕಿತ್ಸೆಗೆ ಸ್ಪಂದಿಸಿ ಆರೋಗ್ಯಕರ ಜೀವನ ನಡೆಸಬಹುದು. ಕರಪತ್ರ, ಪೋಸ್ಟರ್, ಬ್ಯಾನರ್, ಜಾಥಾ, ಗೋಡೆ ಬರಹಗಳ ಮೂಲಕ ಜನರಲ್ಲಿ, ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೈತಿಕ ಬೆಂಬಲ ನೀಡಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ, ಸೋಂಕಿತ ವ್ಯಕ್ತಿ ಧೃತಿಗೆಡದೆ ಚಿಕಿತ್ಸೆ ಪಡೆದುಕೊಳ್ಳಬೇಕು. ಸಮಾಜದಲ್ಲಿ ಎಲ್ಲರಂತೆ ಸರಿ ಸಮನಾಗಿ ಬದುಕಲು ಅವಕಾಶ ಕಲ್ಪಿಸುವ ಮುಖಾಂತರ ಅವರಿಗೆ ನೈತಿಕ ಬೆಂಬಲ ಸೂಚಿಸಬೇಕು ಎಂದು ಹೇಳಿದರು.
ಬಾನೆತ್ತರಕ್ಕೆ ಹಾರಿದ ಬಲೂನು: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಕೆಂಪು ವರ್ಣದ ಬಲೂನ್‌ಗಳನ್ನು ಬಾನೆತ್ತರಕ್ಕೆ ಹಾರಿಸಲಾಯಿತು. ವೇದಿಕೆ ಕಾರ್ಯಕ್ರಮದಲ್ಲಿ ಸೋಂಕು ಕುರಿತು ಅರಿವು ಮೂಡಿಸುವಂತಹ ಕಿರು ನಾಟಕಗಳನ್ನು ಪ್ರದರ್ಶಿಸಲಾಯಿತು. ಏಡ್ಸ್ ನಿಯಂತ್ರಣದ ಕುರಿತು ಜಾಗೃತಿ ಮೂಡಿಸುವ ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.