ಎಚ್​ಎಎಲ್​ಗೆ ಹೇಮಾವತಿ ನೀರು: ಯೋಜನೆಗೆ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನಮೋದನೆ

2
Published on

ವಿಶೇಷ ವರದಿ ತುಮಕೂರು

ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್​ನಲ್ಲಿನ ಹಿಂದೂಸ್ಥಾನ್​ ಏರೊನಾಟಿಕಲ್​ ಲಿಮಿಟೆಡ್​ (ಎಚ್​ಎಎಲ್​)ನ ಹೆಲಿಕಾಪ್ಟರ್​ ಉತ್ಪಾದನಾ ಟಕಕ್ಕೆ ಹೇಮಾವತಿ ನೀರು ಒದಗಿಸಲು ತುಮಕೂರು ಶಾಖಾ ನಾಲೆಯ ವಿತರಣಾ ನಾಲೆ ಅಭಿವೃದ್ಧಿ ಪಡಿಸಲು 25 ಕೋಟಿ ರೂ. ಯೋಜನೆಗೆ ಗುರುವಾರ ರಾಜ್ಯ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ದೇಶದ ಸ್ವಾತಂತ್ರದಿನದ "ಅಮೃತ ಮಹೋತ್ಸವ' ಸಂದರ್ಭದಲ್ಲಿ ಈ ಟಕ ಲೋಕಾರ್ಪಣೆ ನಿರೀಕ್ಷೆ ಗರಿಗೆದರಿದ್ದು, 60 ರಿಂದ 70 ಎಂಸಿಎಫ್​ಟಿ ನೀರು ಒದಗಿಸಲು ಕಳೆದ 2 ವರ್ಷಗಳ ಅವಿರತ ಹೋರಾಟವನ್ನು ಸಂಸದ ಜಿ.ಎಸ್​.ಬಸವರಾಜು ಮಾಡಿದ್ದರು. ಬಿ.ಎಸ್​.ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಕೊನೆಯ ಬೋರ್ಡ್​ ಮೀಟಿಂಗ್​ನಲ್ಲಿ ಹೆಚ್ಚುವರಿ ನೀರು ಒದಗಿಸುವ ಯೋಜನೆಗೆ ಗ್ರೀನ್​ ಸಿಗ್ನಲ್​ ತೋರಿದ್ದರು. ಬಸವರಾಜ ಬೊಮ್ಮಾಯಿ ಸಿಎಂ ಆಗಿ 1 ವರ್ಷದ ಬಳಿಕ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಗಮನಾರ್ಹ ಎನಿಸಿದೆ.

ಕಡಬ ಕೆರೆ ಬದಲು ನಾಲೆಯಿಂದ ನೀರು: ಗುಬ್ಬಿ ತಾಲೂಕು ಕಡಬ ಅಮಾನಿಕೆರೆ ಮೂಲಕ ಎಚ್​ಎಎಲ್​ ಹೆಲಿಕಾಪ್ಟರ್​ ಟಕಕ್ಕೆ ನೀರು ಒದಗಿಸುವ ಒತ್ತಾಯ ಕೇಳಿಬಂದಿತ್ತು. ಆದರೆ, ಎರಡು ಬಹುಗ್ರಾಮ ಕುಡಿಯುವ ನೀರು ಯೋಜನೆಗೂ ಕಡಬ ಕೆರೆ ನೀರು ಬಳಸಲಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕಡಬ ಕೆರೆಯಿಂದ ಎಚ್​ಎಎಲ್​ಗೆ ನೀರು ಕೊಡಲು ವಿರೋಧ ವ್ಯಕ್ತಪಡಿಸಿದ್ದರು. ಎಚ್​ಎಎಲ್​ಗೆ ನೀರು ಕೊಡಲೇಬೇಕೆಂದು ಸಂಸದ ಬಸವರಾಜು ಪಟ್ಟು ಹಿಡಿದಿದ್ದು, ಕೊನೆಗೆ ಹೇಮಾವತಿ ತುಮಕೂರು ಶಾಖಾ ನಾಲೆಯ ವಿತರಣಾ ನಾಲೆ&12ರಿಂದ ನೇರವಾಗಿ ಎಚ್​ಎಎಲ್​ ಟಕಕ್ಕೆ ನೀರು ಕೊಡಲು ಸಂಪುಟ ಒಪ್ಪಿಗೆ ನೀಡಿದೆ.

ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಎಚ್​ಎಎಲ್​ ಟಕಕ್ಕೆ ನೀರು ಹರಿಸುವ ವಿತರಣಾ ನಾಲಾ ಅಭಿವೃದ್ಧಿ ಪಡಿಸಲು 25 ಕೋಟಿ ರೂ. ನೀಡಲು ಖುದ್ದು ಬೊಮ್ಮಾಯಿ ಆಸಕ್ತಿ ವಹಿಸಿದ ಪರಿಣಾಮ ಆಡಳಿತಾತ್ಮಕ ಅನುಮೋದನೆ ದೊರೆತಿದೆ.

ಗುಬ್ಬಿಗೆ ಕುಡಿವ ನೀರಿಗೆ 22 ಕೋಟಿ ರೂ.,: ಗುಬ್ಬಿ ತಾಲೂಕು ಹೇರೂರು ಕೆರೆ ಮೂಲಕ ಗುಬ್ಬಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ವಿತರಣಾ ನಾಲೆಯ&15ರ ಅಭಿವೃದ್ಧಿ ಕಾಮಗಾರಿಗೆ 22 ಕೋಟಿ ರೂ., ಮೊತ್ತದ ಅಂದಾಜು ಪ್ರಸ್ತಾವನೆಗೂ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಆ.15ಕ್ಕೆ ಟಕ ಕಾರ್ಯಾರಂಭ: ದೇಶದ ಹೆಮ್ಮೆಯ ಎಚ್​ಎಎಲ್​ ಸಂಸ್ಥೆಯು ಯುದ್ಧವಿಮಾನ, ಹೆಲಿಕಾಪ್ಟರ್​ ಉತ್ಪಾದನಾ ಟಕವನ್ನು ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್​ನಲ್ಲಿ ಆರಂಭಿಸುತ್ತಿದ್ದು, ಹೆಲಿಕ್ಯಾಪ್ಟರ್​ ತಯಾರಿಕಾ ಟಕವು 610 ಎಕರೆ ಪ್ರದೇಶದಲ್ಲಿದೆ. 2016ರ ಜನವರಿ 3ರಂದು ಟಕದ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಹಂತ, ಹಂತವಾಗಿ ಟಕ ನಿರ್ಮಾಣ ಕಾಮಗಾರಿ ನಡೆದಿದ್ದು 2022ರ ಆಗಸ್ಟ್​ 15ಕ್ಕೆ ಟಕ ಕಾರ್ಯಾರಂಭ ಮಾಡುವ ನಿರೀಕ್ಷೆಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಕುಡಿಯುವ ನೀರು ಒದಗಿಸಲು ಹೇಮಾವತಿ ವಿತರಣಾ ನಾಲೆ&12ರ ಅಭಿವೃದ್ಧಿ ಪಡಿಸಲು 25 ಕೋ.ರೂ., ನೀಡಲು ಸಂಪುಟದ ಅನುಮೋದನೆ ಸಿಕ್ಕಿದೆ.

ಬಿ.ಎಸ್​.ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಎಚ್​ಎಎಲ್​ ಟಕಕ್ಕೆ ಹೇಮೆ ನೀರು ಒದಗಿಸುವಂತೆ ಮನವಿ ಮಾಡಲಾಗಿತ್ತು. ಅದಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದರು. ಈಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಡಳಿತಾತ್ಮಕ ಅನುಮೋದನೆ ಕೊಟ್ಟಿದ್ದು ಇಬ್ಬರಿಗೂ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. > ಜಿ.ಎಸ್​.ಬಸವರಾಜು ಸಂಸದ ಎಚ್​ಎಎಲ್​ ಹೆಲಿಕಾಪ್ಟರ್​ ತಯಾರಿಕಾ ಟಕಕ್ಕೆ 60 ರಿಂದ 70 ಎಂಸಿಎಫ್​ಟಿ ಹೆಚ್ಚುವರಿ ಹೇಮೆ ನೀರನ್ನು ವಿತರಣಾ ನಾಲೆ ಮೂಲಕ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕಡಬ ಕೆರೆಯಿಂದ 2 ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸೇರಿ 25 ಕೋಟಿ ರೂ., ಅನುದಾನ ಒದಗಿಸಲಾಗುವುದು. ವಿತರಣಾ ನಾಲೆಯಿಂದ ಹೇಮೆ ನೀರನ್ನು ನೇರವಾಗಿ ನೀಡಿದ್ದು ಎಚ್​ಎಎಲ್​ನವರೇ ಜಲಸಂಗ್ರಹಾಗಾರವನ್ನು ತಮ್ಮ ಆವರಣದಲ್ಲಿ ನಿರ್ಮಿಸಿ ನೀರು ಶೇಖರಣೆ ಮಾಡಿಕೊಳ್ಳಬೇಕಿದೆ. >ಜೆ.ಸಿ.ಮಾಧುಸ್ವಾಮಿ ಸಣ್ಣನಿರಾವರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net