

ಬೇಲೂರು: ಹಾಸನ ಜಿಲ್ಲೆಯ ಅಭಿವೃದ್ಧಿಯಲ್ಲಿ ಜೆಡಿಎಸ್ ಪಕ್ಷದ ಕೊಡುಗೆ ಸಾಕಷ್ಟಿದೆ ಎಂದು ಮಾಜಿ ಸಚಿವ ಹಾಗೂ ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
ಪಟ್ಟಣದ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ತೋ.ಚ.ಅನಂತ ಸುಬ್ಬರಾಯ ಅವರ ನಿವಾಸದಲ್ಲಿ ಭಾನುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಕೇಳಿದ್ದರಿಂದ ಹಾಸನ-ಬೇಲೂರು ರಸ್ತೆಯನ್ನು ಚತುಷ್ಪತ ರಸ್ತೆಯನ್ನಾಗಿ ಮಾಡಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಒಪ್ಪಿಕೊಂಡಿದ್ದಾರೆ. ದೇವೇಗೌಡರು ಈ ಇಳಿ ವಯಸ್ಸಿನಲ್ಲೂ ಜಿಲ್ಲೆಯ ಅಭಿವೃದ್ಧಿಗಾಗಿ ಓಡಾಟ ನಡೆಸುತ್ತಿದ್ದಾರೆ. ಇದರ ನಡುವೆ ಕೊಟ್ಟ ಅನುದಾನವನ್ನು ರಾಜ್ಯ ಸರ್ಕಾರ ತಡೆ ಹಿಡಿಯುತ್ತದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎರಡು ಭಾರಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದರೂ ಪ್ರಾಣದ ಹಂಗನ್ನು ತೊರೆದು ರಾಜ್ಯದ ಜನತೆಯ ಹಿತದೃಷ್ಟಿಯಿಂದ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಕೊಟ್ಟ ಮಾತಿನಂತೆ ಸಾಲಮನ್ನಾ ಮಾಡಿ ರೈತರನ್ನು ಉಳಿಸಿದ್ದಾರೆ. ರಣಘಟ್ಟ ನೀರಾವರಿ ಯೋಜನೆಗೆ ಬಜೆಟ್‌ನಲ್ಲಿ 100 ಕೋಟಿ ಹಣ ಮಿಸಲಿಟ್ಟಾಗ ಇದು ಹಾಸನದ ಬಜೆಟ್ ಎಂದು ಅಪಹಾಸ್ಯ ಮಾಡಿದ್ದವರು ಈಗ ಅದು ನಮ್ಮ ಕೊಡುಗೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಈಗ ಯಗಚಿ ಡ್ಯಾಂ ನೀರು ಬೇಕು ಅಂತ ಎಲ್ಲ್ಲರೂ ಕೇಳುತ್ತಾರೆ. ಆದರೆ, 1986ರಲ್ಲಿ ಡ್ಯಾಂ ನಿರ್ಮಿಸಲು ದೇವೇಗೌಡರು ಅಡಿಗಲ್ಲು ಹಾಕದಿದ್ದರೆ ಏನಾಗುತ್ತಿತ್ತು ಎಂಬುದನ್ನು ಮೊದಲು ಅರ್ಥಮಾಡಿ ಕೊಳ್ಳಬೇಕು ಎಂದು ಟೀಕಾಕಾರಿಗೆ ತಿರುಗೇಟು ನೀಡಿದರು.
ರಣಘಟ್ಟ ಯೋಜನೆಯನ್ನು ತಡೆ ಹಿಡಿಸಿದರೂ ಶಾಸಕ ಕೆ.ಎಸ್.ಲಿಂಗೇಶ್ ಮಾತ್ರ ಅದನ್ನು ಬಿಡದೆ ಬೆನ್ನತ್ತಿದರು. ಬೇಲೂರಿಗೆ ಬಿಜೆಪಿ ಅಭ್ಯರ್ಥಿ ಕೊಡುಗೆ ಏನೆಂದು ಹೇಳಲಿ ನೋಡೋಣ. ಇನ್ನೂ ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಬೇಲೂರಿಗೆ ಯಾವುದೇ ಕೊಡುಗೆ ನೀಡಲಿಲ್ಲ. ಕಾಂಗ್ರೆಸ್ ಗ್ಯಾರಂಟಿ ಬರೋಲ್ಲ. ಇನ್ನು ಅವರ ಗ್ಯಾರಂಟಿ ಕಾರ್ಡ್ ಏತಕ್ಕೆ. ನಾವು ಕುಮಾರಣ್ಣ ಸಿಎಂ ಅಭ್ಯರ್ಥಿ ಎಂದು ಹೇಳುತ್ತಿದ್ದೇವೆ, ಬಿಜೆಪಿ, ಕಾಂಗ್ರೆಸ್‌ನವರಿಗೆ ತಾಕತ್ತಿದ್ದಾರೆ ಸಿಎಂ ಅಭ್ಯರ್ಥಿ ಘೋಷಿಸಲಿ ಎಂದು ಸವಾಲೆಸೆದರು.
ಜನರಿಗೆ ಎರಡೂ ರಾಷ್ಟ್ರೀಯ ಪಕ್ಷಗಳ ಮೇಲೆ ವಿಶ್ವಾಸವಿಲ್ಲ, ಈ ಭಾರಿ ಕುಮಾರಣ್ಣನಿಗೆ ಅಧಿಕಾರ ನೀಡಬೇಕೆಂದು ಹೇಳುತ್ತಿದ್ದಾರೆ. ಶಾಸಕ ಲಿಂಗೇಶ್ ಉತ್ತಮ ಕೆಲಸ ಮಾಡಿದ್ದಾರೆ. ಆದ್ದರಿಂದ ಜನತೆ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಏಳು ಕ್ಷೇತ್ರವನ್ನೂ ನಾವು ಗೆಲ್ಲುತ್ತೇವೆ. ನಮಗೆ ದೇವೇಗೌಡ, ಕುಮಾರಸ್ವಾಮಿ ಹಾಗೂ ಮತದಾರರೇ ಚಾಣಕ್ಯರು, ಅವರೇ ಸ್ಟಾರ್ ಪ್ರಚಾರಕರು. ನಾವು ರಾಜ್ಯದಲ್ಲಿ 123 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ ಎಂದರು.
ಶಾಸಕ ಕೆ.ಎಸ್.ಲಿಂಗೇಶ್, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ತೋ.ಚ. ಅನಂತ ಸುಬ್ಬರಾಯ, ಮುಖಂಡರಾದ ಬಿ.ಡಿ. ಚಂದ್ರೇಗೌಡ, ಎಂ.ಎ. ನಾಗರಾಜು, ಅದ್ದೂರಿ ಕುಮಾರ್, ಹಗರೆ ದಿಲೀಪ್, ಬಿ.ಸಿ.ಉಮೇಶ್, ಶ್ರೀನಿಧಿ ಇದ್ದರು.