ಎಚ್‌ಡಿಡಿಗೆ ಧಿಕ್ಕಾರ ಕೂಗಿದವರಿಗೆ ಟಿಕೆಟ್

18 krp 01
Published on

ಕೆ.ಆರ್.ಪೇಟೆ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನನಗೆ ಪಕ್ಷದ ಟಿಕೆಟ್ ನೀಡಿ. ಪಕ್ಷದ ವರಿಷ್ಠರಿಗೆ ಮತ್ತು ಕ್ಷೇತ್ರದ ಜನರಿಗೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ತಾಲೂಕು ಜೆಡಿಎಸ್ ಮುಖಂಡ ಬಿ.ಎಲ್.ದೇವರಾಜು ಮನವಿ ಮಾಡಿದರು.


ಪಟ್ಟಣದ ಟಿ.ಎ.ಪಿ.ಎಂ.ಎಸ್. ಆವರಣದಲ್ಲಿ ಪಕ್ಷದ ಅಭ್ಯರ್ಥಿಯ ಆಯ್ಕೆಯ ನಿರ್ಧಾರವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿ ಬಿ.ಎಲ್.ದೇವರಾಜು ಅಭಿಮಾನಿಗಳು ಬುಧವಾರ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ವಕೀಲನಾಗಿದ್ದ ನಾನು 1983ರಲ್ಲಿ ಜನತಾಪಕ್ಷಕ್ಕೆ ಸೇರಿದೆ. ಪಕ್ಷ ಸೇರಿದ ಎರಡೇ ತಿಂಗಳಲ್ಲಿ ಅಂದಿನ ಜನತಾ ಪಕ್ಷದ ಕಾರ್ಯದರ್ಶಿಯಾಗಿ ಕೆಲಸ ಮಾಡಿದೆ. ಜನತಾಪಕ್ಷ ವಿಭಜನೆಯಾದಾಗ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಪರವಾಗಿ ನಿಂತು ಪಕ್ಷ ಕಟ್ಟಿದ್ದೇನೆ. ಮಾಜಿ ಸ್ಪೀಕರ್ ಕೃಷ್ಣ ಎಸ್.ಆರ್.ಬೊಮ್ಮಾಯಿ ಪರ ಹೋದಾಗಲೂ ನಾನು ದೇವೇಗೌಡರ ಪರ ನಿಂತು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಬದಲಾದ ರಾಜಕಾರಣದಲ್ಲಿ ಕೃಷ್ಣ ಅವರು ಮತ್ತೆ ದೇವೇಗೌಡರ ಪಕ್ಷಕ್ಕೆ ಬಂದ ಮೇಲೂ ನಾನು ಕೃಷ್ಣ ಅವರ ಜತೆ ಹೆಗಲುಕೊಟ್ಟು ಪಕ್ಷಕ್ಕಾಗಿ ದುಡಿದಿದ್ದೇನೆ. ನಾನು ದೇವೇಗೌಡರ ಪಕ್ಷವನ್ನು ಒಂದು ಕುಟುಂಬದಂತೆ ಭಾವಿಸಿದ್ದೇನೆ. ಅವರ ಕುಟುಂಬದಲ್ಲಿ ಒಬ್ಬನಾಗಿ ದುಡಿದಿದ್ದೇನೆ. 2013ರಲ್ಲಿ ನನಗೆ ಕೊಟ್ಟಿದ್ದ ಪಕ್ಷದ ಬಿ ಫಾರಂ ಅನ್ನು ಕೆ.ಸಿ.ನಾರಾಯಣಗೌಡರ ಕೈಗೆ ಕೊಟ್ಟಾಗಲೂ ನಾನು ವರಿಷ್ಠರ ಆಶಯವನ್ನು ಗೌರವಿಸಿ ನಡೆದುಕೊಂಡಿದ್ದೇನೆ ಎಂದರು.


2018 ರಲ್ಲಿ ನನಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಕರೆ ಮಾಡಿ ಬಿ ಫಾರಂ ನೀಡಿದ್ದರು. ಕೆ.ಸಿ.ನಾರಾಯಣಗೌಡರಿಗೆ ಟಿಕೆಟ್ ತಪ್ಪಿದ ಕೂಡಲೇ ಅಂದು ಕೆ.ಸಿ.ನಾರಾಯಣಗೌಡರ ಬೆಂಬಲಿಗರ ಪಡೆಯ ಮುಖ್ಯಸ್ಥರಾಗಿದ್ದ ಇಂದಿನ ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ಮತ್ತು ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ಅವರು ದೇವೇಗೌಡರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಿದರು. ನನ್ನ ಮನೆಗೆ ಕಲ್ಲು ಹೊಡೆಸುವ ಯತ್ನ ನಡೆಸಿದರು. ನನಗೆ ಸಿಕ್ಕಿದ್ದ ಬಿ ಫಾರಂ ಕಿತ್ತು ಸಿ ಫಾರಂ ತರುವ ಮೂಲಕ ಕೆ.ಸಿ.ನಾರಾಯಣಗೌಡರನ್ನು ಎರಡನೇ ಅವಧಿಗೆ ಕ್ಷೇತ್ರದ ಶಾಸಕರನ್ನಾಗಿಸಿದರು. ಆಗಲೂ ನಾನು ಪಕ್ಷದ ವಿರುದ್ಧ ಕೆಲಸ ಮಾಡಲಿಲ್ಲ. ಕೆ.ಸಿ.ನಾರಾಯಣಗೌಡ ಪಕ್ಷದ ವರಿಷ್ಠರಿಗೆ ಕೈಕೊಟ್ಟು ಬಿಜೆಪಿ ಸೇರಿ ಮಂತ್ರಿಯಾಗಿದ್ದಾರೆ. ಅಂದು ನಾರಾಯಣಗೌಡರ ಪರ ನಿಂತು ದೇವೇಗೌಡರಿಗೆ ಧಿಕ್ಕಾರದ ಕೂಗಿದ ವ್ಯಕ್ತಿಗಳಿಗೆ ಇಂದು ಜೆಡಿಎಸ್ ಟಿಕೆಟ್ ನೀಡುವುದಕ್ಕೆ ನನ್ನ ವಿರೋಧವಿದೆ ಎಂದು ಆಕ್ಷೇಪಿಸಿದರು.


ಪಕ್ಷದ ನಿಷ್ಠಾವಂತನಾದ ನನಗೆ ಅವಕಾಶ ನೀಡಿ. ಕೆ.ಆರ್.ಪೇಟೆ ಕ್ಷೇತ್ರದ ಅಭ್ಯರ್ಥಿ ಪ್ರಕಟಣೆಯನ್ನು ಮರುಪರಿಶೀಲಿಸುವಂತೆ ಬಿ.ಎಲ್.ದೇವರಾಜು ಮನವಿ ಮಾಡಿದರು.
ಮುಖಂಡ ಬಸ್ ಕೃಷ್ಣೇಗೌಡ ಮಾತನಾಡಿ, ಇದು ಬಂಡಾಯದ ಸಭೆಯಲ್ಲ. ಕಾರ್ಯಕರ್ತರ ಆಶಯದ ಧ್ವನಿಯನ್ನು ಪಕ್ಷದ ವರಿಷ್ಠರಿಗೆ ಮುಟ್ಟಿಸುವ ನಿವೇದನಾ ಸಭೆ. ಬಿ.ಎಲ್.ದೇವರಾಜು ತತ್ವ ಮತ್ತು ಸಿದ್ಧಾಂತದ ಚೌಕಟ್ಟಿನಲ್ಲಿ ಕೆಲಸ ಮಾಡುವ ರಾಜಕಾರಣಿ. ಕ್ಷೇತ್ರದ ಟಿಕೆಟ್ ಆಕಾಂಕ್ಷಿತರಾಗಿದ್ದವರೆಲ್ಲರೂ ದೇವರಾಜುಗಾಗಿ ಟಿಕೆಟ್ ಹೋರಾಟವನ್ನು ನಿಲ್ಲಿಸಿ ಅವರ ಪರವಾಗಿದ್ದೇವೆ. ಟಿಕೆಟ್ ವಿಚಾರದಲ್ಲಿ ಪಕ್ಷದ ವರಿಷ್ಠರು ತೆಗೆದುಕೊಂಡಿರುವ ತೀರ್ಮಾನವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದರು.


ಮುಖಂಡ ಬಸ್ ಸಂತೋಷ್‌ಕುಮಾರ್ ಮಾತನಾಡಿ, ಬಿ.ಎಲ್.ದೇವರಾಜು ಹೋರಾಟದ ಮೂಲಕ ಪಕ್ಷ ಕಟ್ಟಿದ್ದಾರೆ. ವರಿಷ್ಠರ ಮನೆ ಬಾಗಿಲು ಸುತ್ತುವವರನ್ನು ಪರಿಗಣಿಸಿ ಟಿಕೆಟ್ ನೀಡುವ ಬದಲು ಜನರ ಮಧ್ಯೆ ದುಡಿಯುವ ಜನನಾಯಕರನ್ನು ಗುರುತಿಸಿ ಟಿಕೆಟ್ ನೀಡುವಂತೆ ಮನವಿ ಮಾಡಿದರು. ದೇವರಾಜು ಅವರಿಗೆ ಟಿಕೆಟ್ ನೀಡಿದರೆ ಮಾತೃ ಪಕ್ಷಕ್ಕೆ ಮರಳುವ ನಿರ್ಧಾರದಲ್ಲಿದ್ದಾರೆ. ವರಿಷ್ಠರು ತಮ್ಮ ನಿರ್ಧಾರ ಬದಲಿಸದಿದ್ದರೆ ನಮ್ಮಿಂದಲೇ ಶೇ.40 ರಷ್ಟು ಜನ ಅನ್ಯ ಪಕ್ಷಕ್ಕೆ ಹೋಗಲಿದ್ದಾರೆಂದು ಎಚ್ಚರಿಸಿದರು.


ಜಿಪಂ ಮಾಜಿ ಸದಸ್ಯ ರಾಮದಾಸ್, ತಾಪಂ ಮಾಜಿ ಸದಸ್ಯರಾದ ಕಡಹೆಮ್ಮಿಗೆ ಧನಂಜಯ, ಎ.ಎಂ.ಸಂಜೀವಪ್ಪ, ಬಿ.ಎನ್.ದಿನೇಶ್, ಮುಖಂಡರಾದ ಕೆ.ಎನ್.ಕಿರಣ(ಗುಂಡ), ಸೋಮಯ್ಯ, ಶಶಿಧರ ಸಂಗಾಪುರ, ಎಂ.ಪಿ.ಲೋಕೇಶ್, ಮಡುವಿನಕೋಡಿ ಚಂದ್ರಶೇಖರ್, ಮಡುವಿನಕೋಡಿ ನಾಗೇಶ್, ಚಿಕ್ಕತಾರಹಳ್ಳಿ ರಾಮಕೃಷ್ಣೇಗೌಡ, ಕೋಟಹಳ್ಳಿ ಶ್ರೀನಿವಾಸ್, ಕಾಯಿ ಸುರೇಶ್, ತುಳಸಿ ಮಂಜಣ್ಣ, ತಿಮ್ಮೇಗವಡ, ಕುಂದನಹಳ್ಳಿ ಶಿವಕುಮಾರ್, ರಾಯಸಮುದ್ರ ಕುಮಾರ್, ಶಿವಲಿಂಗೇಗೌಡ, ಬಿ.ಆರ್.ವೆಂಕಟೇಶ್, ವಕೀಲರಾದ ಬಳ್ಳೇಕೆರೆ ಯೋಗೇಶ್, ಮದ್ದಿಕ್ಯಾಚುಮನಹಳ್ಳಿ ಸುರೇಶ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದು, ಬಿ.ಎಲ್.ದೇವರಾಜು ಪರ ಬೆಂಬಲ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net