ಎಚ್‌ಡಿಕೆ ಹೇಳಿಕೆ ಖಂಡನೀಯ

07tnpnewsfile01.ppTota basavaraju
ತೋಟದಪ್ಪ ಬಸವರಾಜು
Published on

ತಿ.ನರಸೀಪುರ: ರಾಜ್ಯದಲ್ಲಿ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಿಎಂ ಆಗುತ್ತಾರೆಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಖಂಡನೀಯ ಎಂದು ಬಿಜೆಪಿ ಹಿರಿಯ ಮುಖಂಡ ತೊಟ್ಟದಪ್ಪ ಬಸವರಾಜು ಹೇಳಿದರು.

ಜಾತ್ಯತೀತ ಜನತಾದಳ ಜಾತಿ ಕುಟುಂಬದ ಪಕ್ಷ ಎಂಬುದನ್ನು ಎಚ್‌ಡಿಕೆ ಸಾಬೀತುಪಡಿಸಿದ್ದಾರೆ. ಆದ್ದರಿಂದ ಜಾತ್ಯತೀತ ದಳ ಎಂಬ ಹೆಸರನ್ನು ಬದಲಾಯಿಸಿ ಜಾತಿ ಕುಟುಂಬದ ಪಕ್ಷ ಎಂದು ಹೆಸರಿಟ್ಟುಕೊಳ್ಳುವುದು ಒಳಿತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.

ಕಾಂಗ್ರೆಸ್, ಜೆಡಿಎಸ್ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಆ ಪಕ್ಷಗಳ ನಾಯಕರಿಗೆ ಮನದಟ್ಟಾಗಿದೆ. ಜೆಡಿಎಸ್ 25ಕ್ಕಿಂತ ಹೆಚ್ಚಿಗೆ ಬರುವುದಿಲ್ಲ ಎಂದು ಕಾಂಗ್ರೆಸ್‌ನವರು ಹೇಳಿದ್ದಾರೆ. ಅಂತೆಯೇ ಕಾಂಗ್ರೆಸ್ 49ಕ್ಕಿಂತ ಹೆಚ್ಚಿಗೆ ಬರುವುದಿಲ್ಲ ಎಂದು ಜೆಡಿಎಸ್‌ನವರು ಹೇಳಿದ್ದಾರೆ. ಬಿಜೆಪಿ 150 ಸ್ಥಾನ ಗೆಲ್ಲಲಿದೆ ಎಂಬುದನ್ನು ಅರಿತಿರುವ ಎರಡೂ ಪಕ್ಷಗಳ ಮುಖಂಡರು ಈಗ ಹತಾಶೆ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಕಳೆದ ಬಾರಿ ಸಿದ್ದರಾಮಯ್ಯ ಅವರು ವೀರಶೈವ-ಲಿಂಗಾಯತರನ್ನು ಬೇರ್ಪಡಿಸಲು ಹೋಗಿ ಸೋಲು ಅನುಭವಿಸಿದರು. ಈ ಬಾರಿ ಕುಮಾರಸ್ವಾಮಿ ಅವರು ಬ್ರಾಹ್ಮಣ ಸಿಎಂ ಹೇಳಿಕೆ ಮೂಲಕ ಸಮಸ್ತ ಹಿಂದು ಸಮಾಜವನ್ನು ಬೇರ್ಪಡಿಸಲು ಹೊರಟಿದ್ದಾರೆ. ಇಂತಹ ಸಮಾಜಘಾತುಕ ಹೇಳಿಕೆಯ ಮೂಲಕ ರಾಜಕೀಯ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎನ್ನುವ ಬದಲು ಇಬ್ರಾಹಿಂ ಅವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಜೆಡಿಎಸ್ ಘೋಷಿಸಲಿ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net