

ಮಂಡ್ಯ : ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ವಿಶ್ವಾಸ ವ್ಯಕ್ತಪಡಿಸಿದರು.
ಮದ್ದೂರು ತಾಲೂಕಿನ ಮಹರ್ನವಮಿದೊಡ್ಡಿ ಗ್ರಾಮದಲ್ಲಿ ಜೆಡಿಎಸ್ ಮುಖಂಡರಾದ ಮಹರ್ನವಮಿದೊಡ್ಡಿ ಚಂದ್ರು ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೆಡಿಎಸ್ ಪಕ್ಷ ರೈತರ, ಬಡವರ, ಹಿಂದುಳಿದವರ, ಕಾರ್ಮಿಕರ ಪಕ್ಷವಾಗಿದ್ದು, ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸರ್ವ ಜನಾಂಗಕ್ಕೂ ಅನುಕೂಲವಾಗುವ ಯೋಜನೆಗಳನ್ನು ಕುಮಾರಸ್ವಾಮಿ ಅವರು ಜಾರಿಗೆ ತಂದು ಪ್ರತಿಯೊಬ್ಬರು ನೆಮ್ಮದಿ ಜೀವನ ನಡೆಸುವಂತೆ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.
ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ನನ್ನ ಅಧಿಕಾರವದಿಯಲ್ಲಿ ಬೆಸಗರಹಳ್ಳಿ ಭಾಗಕ್ಕೆ ಅಪಾರ ಕೊಡುಗೆ ನೀಡಿದ್ದೇನೆ. 16 ಕೋಟಿ ರೂ. ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ನೂತನ ಆಸ್ಪತ್ರೆಯ ಕಟ್ಟಡ, ಸುಸಜ್ಜಿತವಾದ ಬಸ್ ನಿಲ್ದಾಣ, ರಸ್ತೆಗಳ ಅಭಿವೃದ್ಧಿ, ಪಶು ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ಮತ್ತು ಕೆಪಿಎಸ್ ಶಾಲೆ ನೀಡುವ ಮೂಲಕ ಕ್ಷೇತ್ರದಲ್ಲೇ ಬೆಸಗರಹಳ್ಳಿ ಭಾಗಕ್ಕೆ ಹೆಚ್ಚು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದರು.
ತಾಲೂಕನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಈ ಬಾರಿ ಚುನಾವಣೆಯಲ್ಲಿ ನನ್ನನ್ನು ಅಧಿಕ ಮತಗಳಿಂದ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಹಿರಿಯ ಮುಖಂಡ ಮಹರ್ನವಮಿದೊಡ್ಡಿ ಚಂದ್ರು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ, ಗ್ರಾ.ಪಂ. ಅಧ್ಯಕ್ಷೆ ಜ್ಯೋತಿನಾರಾಯಣ, ಸದಸ್ಯರಾದ ಅನಿತಾ ವೆಂಕಟೇಶ್, ಎಂ.ಎಸ್. ಮಂಜುನಾಥ್, ಎಂ.ಎಸ್.ಲೋಕೇಶ್, ಬಿ.ನಾಗರಾಜಮೂರ್ತಿ, ಮುಖಂಡರಾದ ಪಣ್ಣೆದೊಡ್ಡಿ ಹನುಮಂತು, ಹರಿಪ್ರಸಾದ್, ನಾಗೇಶ್, ವಾಸು, ಎಂ.ಎನ್.ರವಿ, ಬೋರಪ್ಪ, ಸತ್ಯಪ್ಪ, ಮನೋಹರ, ಸೇರಿದಂತೆ ಇತರರು.