ಎಚ್‌ಡಿಕೆ ವೃಥಾ ಆರೋಪ ಬಿಟ್ಟು ದಾಖಲೆ ಕೊಡಲಿ

Bairathi Suresh
Published on

ರಾಯಚೂರು
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವೃಥಾ ಆರೋಪ ಮಾಡುವುದನ್ನು ಬಿಟ್ಟು ದಾಖಲೆ ಕೊಡಲಿ. ತನಿಖೆಯಾದಾಗ ಅವರು ಹೇಳಿದ್ದು ನಿಜವಾ, ಸುಳ್ಳಾ ಎಂದು ಗೊತ್ತಾಗಲಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಹೇಳಿದರು.
ಸ್ಥಳೀಯ ಜಿಲ್ಲಾಕಾರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಬರೇ ಪೆನ್‌ಡ್ರೈವ್ ಬಾಂಬ್ ಹಾಕುವುದಾಗಿ ಹೇಳುತ್ತಾ ಬರುತ್ತಿದ್ದಾರೆ ಹೊರತು ದಾಖಲೆ ಕೊಡುತ್ತಿಲ್ಲ. ಅದಕ್ಕೆ ನಾವು ಯಾಕೆ ಉತ್ತರ ನೀಡಬೇಕು ಜನಗಳೇ ಅವರಿಗೆ ಉತ್ತರ ಕೊಡುತ್ತಾರೆ ಎಂದರು.
ಬಿಡಿಎ ಮತ್ತು ನೈಸ್ ಹಗರಣಕ್ಕೆ ಸಂಬಂಸಿದಂತೆ ಎಚ್‌ಡಿಕೆ ಪ್ರಧಾನಿಗೆ ಪತ್ರ ಬರೆದಿದ್ದಾಗಿ ಹೇಳುತ್ತಿದ್ದಾರೆ. ಅಕ್ರಮದ ಬಗ್ಗೆ ದಾಖಲೆಗಳಿದ್ದರೆ ಅವರು ಬಿಡುಗಡೆ ಮಾಡಲಿ. ಅವರು ಹೇಳಿದ್ದನ್ನೆ ಹೇಳಿಕೊಂಡು ಹೋಗುತ್ತಾರೆ. ಅದಕ್ಕೆಲ್ಲ ನಾನು ಉತ್ತರ ಕೊಡಲ್ಲ.
ಪ್ರತಿದಿನ ಮಾಡುವ ಆರೋಪಗಳಿಗೆ ಪ್ರತಿದಿನ ಉತ್ತರ ಕೊಡುತ್ತಾ ಹೋದರೆ ಬೆಲೆನೇ ಇರಲ್ಲ. ಅವರು ಏನು ದಾಖಲೆ ಕೊಡುತ್ತಾರೆ ಕೊಡಲಿ. ನಾವು ತನಿಖೆ ನಡೆಸುತ್ತೇವೆ. ಆವಾಗ ಸತ್ಯಾಂಶ ಹೊರಬರುತ್ತದೆ. ಪೆನ್‌ಡ್ರೈವ್ ತೋರಿಸಿ ದಿನಕ್ಕೊಂದು ಆರೋಪ ಮಾಡುವುದರಲ್ಲಿ ಅರ್ಥವಿಲ್ಲ.
ನಮ್ಮ ಪಕ್ಷದ ಶಾಸಕರ ಮಧ್ಯೆ ಯಾವುದೇ ಅಸಮಾಧನವಿಲ್ಲ. ಶಾಸಕಾಂಗ ಸಭೆಯಲ್ಲಿ ಜನರ ಹಾಗೂ ಶಾಸಕರ ಕೆಲಸಗಳು ಆಗಲಿ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು ನಾಳೆ ಕೆಲವು ಜಿಲ್ಲೆಗಳ ಶಾಸಕರ ಸಭೆ ಕರೆದಿದ್ದಾರೆ. ಅದು ಅಸಮಾಧಾನಿತ ಶಾಸಕರ ಸಭೆಯಲ್ಲ.
ಹೊಸ ಸರ್ಕಾರ ಬಂದಾಗ ಹೊಸ ಶಾಸಕರು, ಸಾರ್ವಜನಿಕರ ಹೊಸ ಕೆಲಸಗಳ ಬಗ್ಗೆ ಅಪೇಕ್ಷೆ ಇರುತ್ತವೆ. ಆ ಅಪೇಕ್ಷೆಗಳಿಗೆ ಸ್ಪಂದಿಸಬೇಕಾಗಿದ್ದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಶಾಸಕರ ಸಭೆ ಕರೆದಿದ್ದಾರೆ ಹೊರತು ಯಾವುದೇ ಅರ್ಥ ಕಲ್ಪಿಸುವ ಅಗತ್ಯವಿಲ್ಲ.
ಕುಡಿಯುವ ನೀರಿಗಾಗಿ ಕಳೆದ ಸರ್ಕಾರದ ಅವಯಲ್ಲಿ 92 ಸಾವಿರ ಕೋಟಿ ರೂ. ಹಣ ಮೀಸಲಿಟ್ಟ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಮುಖ್ಯಮಂತ್ರಿಗಳು ಹಣಕಾಸು ಖಾತೆಯನ್ನು ಹೊಂದಿದ್ದು, ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಭೈರತಿ ಸುರೇಶ ತಿಳಿಸಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು, ಶಾಸಕ ಡಾ.ಶಿವರಾಜ ಪಾಟೀಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net