ಎಚ್‌ಡಿಕೆ, ಬೊಮ್ಮಾಯಿ ಇಬ್ಬರೇ ಸತ್ಯಹರಿಶ್ಚಂದ್ರರು

H Vishwanath
Published on

ಮೈಸೂರು: ಸತ್ಯಹರಿಶ್ಚಂದ್ರ ಸತ್ತ ಮೇಲೆ ಇಬ್ಬರೇ ಸತ್ಯಹರಿಶ್ಚಂದ್ರರು ಇರೋದು. ಒಬ್ಬರು ಎಚ್.ಡಿ.ಕುಮಾರಸ್ವಾಮಿ, ಇನ್ನೊಬ್ಬರು ಬಸವರಾಜ ಬೊಮ್ಮಾಯಿ ಎಂದು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಲೇವಡಿ ಮಾಡಿದರು.+


ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರೂ ಮುಖ್ಯಮಂತ್ರಿ ಆಗಿದ್ದವರು. ಆಗ ಮಾಡಿದ ಅಧ್ವಾನಗಳನ್ನು ಜನ ಈಗಲೂ ಅನುಭವಿಸುತ್ತಿದ್ದಾರೆ ಎಂದು ಕುಟುಕಿದರು.


ಕುಮಾರಸ್ವಾಮಿ ಅವರೇ ಆ ಪೆನ್ ಡ್ರೈವ್ ಏನಾಯ್ತು? ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬೇಡಿ. ಏನೇನೋ ಆರೋಪ ಮಾಡುತ್ತೀರಿ? ಆದರೆ ಯಾವುದನ್ನು ಸಾಬೀತು ಮಾಡಿದ್ದೀರಿ? ನೀವು ಮುಖ್ಯಮಂತ್ರಿ ಆಗಿದ್ದವರು. ಮಾತಿನಿಂದ ನಿಮ್ಮ ಘನತೆ ಕಡಿಮೆ ಆಗುತ್ತಿದೆ ಎಂದು ಕಿಡಿಕಾರಿದರು.


ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಪಿ-ಟಿಎಸ್‌ಪಿ ಹಣ ಬಳಕೆ ಕುರಿತು ಸಮರ್ಥನೆ ಮಾಡಿಕೊಂಡ ವಿಶ್ವನಾಥ ಅವರು, ಅಗತ್ಯ ಇರುವ ಕಡೆಗೆ ಅನುದಾನ ಬಳಸಿಕೊಳ್ಳಲು ಸರ್ಕಾರಕ್ಕೆ ಅಧಿಕಾರ ಇದೆ. ಅದನ್ನೇ ಬಿಜೆಪಿ, ಜೆಡಿಎಸ್‌ನವರು ದೊಡ್ಡದಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ದಲಿತರಿಗೆ ಏನು ಮಾಡಿದ್ದರು ಎಂದು ಪ್ರಶ್ನಿಸಿದರು.


ನಾನೂ ಜೆಡಿಎಸ್ ರಾಜ್ಯಾಧ್ಯಕ್ಷ ಆಗಿದ್ದೆ. ಸಮ್ಮಿಶ್ರ ಸರ್ಕಾರದಲ್ಲಿ 12 ಸಚಿವ ಸ್ಥಾನ ಸಿಕ್ಕಿತ್ತು. ಇದರಲ್ಲಿ 7 ಸಚಿವರು ಕುಮಾರಸ್ವಾಮಿ ಮನೆಯವರೇ ಆಗಿದ್ದರು. ಬಂಡೆಪ್ಪ ಕಾಶಂಪೂರ ಒಬ್ಬ ಕುರುಬ, ಇನ್ನಿಬ್ಬರು ಲಿಂಗಾಯತರು. ಎರಡು ಸಚಿವ ಸ್ಥಾನ ಖಾಲಿಯೇ ಇತ್ತು. ದಲಿತರು ಹಾಗೂ ಮುಸ್ಲಿಮರಿಗೆ ಕೊಡಿ ಅಂತ ಕೇಳಿದ್ದೆ. ಖಾಲಿ ಬಿಟ್ಟರೆ ಹೊರತು ದಲಿತರಿಗೆ ಸಚಿವ ಸ್ಥಾನ ಸಿಗಲಿಲ್ಲ. ಅಂಥವರು ಈಗ ದಲಿತರ ಉದ್ಧಾರದ ಬಗ್ಗೆ ಮಾತನಾಡುತ್ತಾರೆ ಎಂದು ಜೆಡಿಎಸ್ ವಿರುದ್ಧ ಕಿಡಿಕಾರಿದರು.


ನಾನೂ ಟಿಕೆಟ್ ಆಕಾಂಕ್ಷಿ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ನಾನೂ ಆಕಾಂಕ್ಷಿ ಎಂದು ವಿಶ್ವನಾಥ್ ಹೇಳಿದರು.
ನಾನು ಕಾಂಗ್ರೆಸ್ ಟಿಕೆಟ್ ಕೇಳೋಣ ಅಂದುಕೊಂಡಿದ್ದೀನಿ. ಮುಂದಿನ ದಿನಗಳಲ್ಲಿ ಏನಾಗುತ್ತದೆಯೋ ನೋಡೋಣ. ಯತೀಂದ್ರ ಸಿದ್ದರಾಮಯ್ಯ ಹೆಸರು ಪ್ರಸ್ತಾಪ ಆಗಿದೆ. ಅದು ಒಳ್ಳೆಯದೆ. ಕಾಂಗ್ರೆಸ್ ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ನೋಡೋಣ. ಡಿ.ಕೆ.ಶಿವಕುಮಾರ್, ನಾನು ಒಳ್ಳೆಯ ಸ್ನೇಹಿತರು. ಈಗ ಅವರು ರಾಜ್ಯದ ಡಿಸಿಎಂ ಆಗಿದ್ದಾರೆ. ಅವರನ್ನು ಭೇಟಿ ಮಾಡೋದು ತಪ್ಪಾ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net