ಎಚ್‌ಡಿಕೆ ಪೆನ್‌ಡ್ರೈವ್ ಪ್ರದರ್ಶನ ಹಾಸ್ಯಾಸ್ಪದ

ae3babb2-cfc2-4382-b168-57dce5982637
Published on

ಮೈಸೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪೆನ್‌ಡ್ರೈವ್ ತೋರಿಸುತ್ತಿರುವುದು ಹಾಸ್ಯಾಸ್ಪದ ಮತ್ತು ಬ್ಲಾೃಕ್‌ಮೇಲ್ ತಂತ್ರವಾಗಿದೆ ಎಂದು ಕೆಪಿಸಿಸಿ ವಕ್ತಾರ ಸತ್ಯಾನಂದ್ ಕಿಡಿಕಾರಿದರು.


250 ರೂ.ಗೆ ಸಿಗುವ ಪೆನ್‌ಡ್ರೈವ್ ಜೇಬಿನಲ್ಲಿರಿಸಿಕೊಂಡು ‘ಬೊಗಳೆದಾಸ ಕುಮಾರ’ ಎನ್ನುವ ಚಲನಚಿತ್ರದ ಟ್ರೈಲರ್ ತೋರಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಹರಿಹಾಯ್ದರು.


ಬಿಜೆಪಿ ಓಲೈಸುವ ಉದ್ದೇಶದಿಂದ ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಪ್ರತಿಪಕ್ಷ ನಾಯಕ ಸ್ಥಾನ ಬೇಕಿದ್ದರೆ ಅವರು ಮೊದಲು ಜೆಡಿಎಸ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲಿ ಎಂದು ಸವಾಲು ಹಾಕಿದರು.


ಪ್ರತಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ. ಕಾಂಗ್ರೆಸ್ ವಿರುದ್ಧ ಯಾರು ಹೆಚ್ಚು ಕೆಸರು ಎರಚುವರೋ ಅವರಿಗೆ ಪ್ರತಿಪಕ್ಷ ನಾಯಕ ಸ್ಥಾನ ನೀಡುವುದಾಗಿ ಬಿಜೆಪಿ ವರಿಷ್ಠರು ಟಾಸ್ಕ್ ನೀಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ವಿನಾಕಾರಣ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


ಹಿಂದೊಮ್ಮೆ ಎಚ್.ಡಿ.ದೇವೇಗೌಡರು ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿದ ತೃತೀಯ ರಂಗ ಸ್ಥಾಪಿಸುವುದಾಗಿ ಹೇಳಿದ್ದರು. ಬಳಿಕ ಕೆಲವೇ ಗಂಟೆಗಳಲ್ಲೇ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಅಧಿನಾಯಕಿಯ ಮನೆಗೆ ಮುಖ ಮುಚ್ಚಿಕೊಂಡು ಹೋದ ಘಟನೆ ಎಲ್ಲೆಡೆ ಸುದ್ದಿಯಾಗಿತ್ತು. ಇದನ್ನು ಮರೆತಿದ್ದಾರೆಯೇ? ಎಂದು ಪ್ರಶ್ನಿಸಿದರು.


ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಎಚ್‌ಡಿಕೆ ಟೀಕಿಸಿದ್ದಾರೆ. ಆದರೆ, ಹಿಂದೊಮ್ಮೆ ಎಚ್.ಡಿ.ದೇವೇಗೌಡರು ಸಿಎಂ ಆಗಿದ್ದಾಗ ಸದನದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ‘ದೇವೇಗೌಡರು ಮುಖ್ಯಮಂತ್ರಿಯೋ ಅಥವಾ ಅವರ ಪುತ್ರ ರೇವಣ್ಣ ಮುಖ್ಯಮಂತ್ರಿಯೋ’ ಎಂಬ ಸಂಶಯ ಜನರಲ್ಲಿ ಮೂಡುತ್ತಿದೆ ಎಂದು ಹೇಳಿದನ್ನು ನೆನಪಿಸಿಕೊಳ್ಳಲಿ. ಹೀಗಾಗಿ, ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಬಗ್ಗೆ ವೃಥಾ ಟೀಕಿಸುವುದು ಬೇಡ ಎಂದರು.


ಮತ್ತೊಬ್ಬ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಮಾತನಾಡಿ, ತಿ.ನರಸೀಪುರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಸಾಂತ್ವನ ಹೇಳಲು ಬರುತ್ತಿಲ್ಲ. ಬದಲಾಗಿ ಕೋಮುವಾದ ಬಳಸಿಕೊಳ್ಳಲು ಆಗಮಿಸುತ್ತಿದ್ದಾರೆ. ಹೀಗಾಗಿ, ಯುವಜನರು ಎಚ್ಚೆತ್ತುಕೊಂಡು ಕಾಂಗ್ರೆಸ್ ನೀಡಿರುವ ಸೌಲಭ್ಯ ಬಳಸಿಕೊಂಡು ಮುಂದೆ ಬರಬೇಕು ಎಂದು ಮನವಿ ಮಾಡಿದರು.


ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net