

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಜೆಡಿಎಸ್ ಬಡವರ ಪರವಾಗಿ ಇರುವ ಪಕ್ಷ. ಈ ಬಾರಿ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಅವರನ್ನು ಬೆಂಬಲಿಸುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಲ ನೀಡಿಬೇಕಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ತಿಮ್ಮರಾಯಪ್ಪ ಮನವಿ ಮಾಡಿದರು.
ನಗರದ ವೀವರ‌್ಸ ಕಾಲನಿಯಲ್ಲಿ ಜೆಡಿಎಸ್‌ನಿಂದ ಸೋಮವಾರ ಆಯೋಜಿಸಿದ್ದ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಅವರ ಪರ ಮತಯಾಚನೆ ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದರೇ ರೈತರ ಹಾಗೂ ಸ್ತ್ರೀಶಕ್ತಿ ಸಂಘದ ಸಾಲಮನ್ನಾ ಮಾಡಲಾಗುತ್ತದೆ. ವೃದ್ಧಾಪ್ಯ ವೇತನ ಹೆಚ್ಚಳ, ಉಚಿತ ಸಿಲಿಂಡರ್, ರೈತರ ಮಕ್ಕಳನ್ನು ಮದುವೆ ಆದವರಿಗೆ 2 ಲಕ್ಷ ರೂ. ಸಹಾಯಧನ ಸೇರಿ ಹತ್ತು ಹಲವಾರು ಯೋಜನೆಗಳು ಜಾರಿಗೆ ಬರಲಿವೆ ಎಂದರು.
ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳು ಪಂಚೇಂದ್ರಿಯ ಇದ್ದಂತೆ. ಈ ಯೋಜನೆಗಳಲ್ಲಿ ರೈತ ಶಕ್ತಿ ಉದ್ಯೋಗ, ಸ್ತ್ರೀ ಸಬಲೀಕರಣ, ಶಿಕ್ಷಣ, ಆರೋಗ್ಯ ಸೇರಿ ರಾಜ್ಯದ ಸಾರ್ವತೋಮುಖ ಅಭಿವೃದ್ಧಿಗೆ ಯೋಜನೆ ಜಾರಿಗೆ ತರಲಿದ್ದಾರೆ ಎಂದರು.
ಜೆಡಿಎಸ್ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಸ್ಥಳೀಯರಾಗಿದ್ದು, ಕ್ಷೇತ್ರದ ಜನರ ನಾಡಿ ಮಿಡಿತ ಅರಿತ್ತಿದ್ದಾರೆ. ಸಮಸ್ಯೆ, ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಅರಿವಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಕ್ಷೇತ್ರದವರಲ್ಲ, ಚುನಾವಣೆಯನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಕೋಟಿ ಕೋಟಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಎಲ್ಲಿಂದಲೋ ಬಂದು ಹಣದಿಂದ ಮತದಾರರನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಕ್ಷೇತ್ರ ಜನ ಅರ್ಥ ಮಾಡಿಸಬೇಕು ಎಂದರು.
ನಗರಸಭೆ ಸದಸ್ಯ ಎನ್.ಗಣೇಶ್ ಮಾತನಾಡಿ, ಜೆಡಿಎಸ್ ಅಧಿಕಾರಕ್ಕೆ ಬಂದರೆ ಉತ್ತಮ ಆಡಳಿತ ನೀಡುತ್ತದೆ. ನೆಲಮಂಗಲ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ್ದ ಕೀರ್ತಿ ಜೆಡಿಎಸ್ ಸರ್ಕಾರಕ್ಕೆ ಸಲ್ಲುತ್ತದೆ. ನಗರದಾದ್ಯಂತ ನಗರಾಭಿವೃದ್ಧಿಯಿಂದ ಕೋಟ್ಯಂತರ ಅನುದಾನವನ್ನು ಬಿಡುಗಡೆ ಮಾಡಿದ್ದು, ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದಿವೆ. ಜೆಡಿಎಸ್ ಅಭ್ಯರ್ಥಿ ವೈದ್ಯರಾಗಿದ್ದು, ವಿದ್ಯಾವಂತರು, ಬುದ್ಧಿವಂತರು ಹಾಗೂ ವಿಚಾರವಂತರಿದ್ದು, ತಾಲೂಕಿನ ಅಭಿವೃದ್ಧಿಯ ಉದ್ದೇಶದಿಂದ ಮತ್ತೊಮ್ಮ ಆಶೀರ್ವಾದ ಮಾಡಬೇಕು ಎಂದರು.
ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಹನುಮಂತರಾಜು, ನಗರಸಭೆ ನಾಮನಿರ್ದೇಶಿತ ಸದಸ್ಯ ಕೆ.ವಸಂತ್, ಸವಿತಾ ಸಮಾಜದ ಗೌರವಾಧ್ಯಕ್ಷ ಗೋವಿಂದರಾಜು, ತಾಪಂ ಮಾಜಿ ಸದಸ್ಯ ನರಸಿಂಹಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಮಂಜಮ್ಮ, ಕರವೇ ತಾಲೂಕು ಅಧ್ಯಕ್ಷ ಸುರೇಶ್, ಮುಖಂಡರಾದ ನಾರಾಯಣ್‌ರಾವ್, ಪುಟ್ಟಬೇಲೆಗೌಡ ಯಜಮಾನ್ ಉಮೇಶ್, ಅಶೋಕ್, ಲೋಕೇಶ್‌ಗೌಡ, ಯಶ್ವವಂತ್, ಶೇಖರ್, ಶಾರ್ಮಾ, ಕೃಷ್ಣ ಉಪಸ್ಥಿತರಿದ್ದರು.
ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮತಯಾಚನೆ: ಜೆಡಿಎಸ್ ಅಭ್ಯರ್ಥಿ, ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅವರು ಸೋಮವಾರ ತಾಲೂಕಿನ ಕಳಲುಘಟ್ಟ ಗ್ರಾಪಂ ವ್ಯಾಪ್ತಿಯ ಮಿಣ್ಣಾಪುರ, ನರಸಾಪುರ, ಗುಂಡೇನಹಳ್ಳಿ, ಕೋಡಿಪಾಳ್ಯ, ಬಿದಲೂರು ಗೋವೇನಹಳ್ಳಿ ಸೇರಿ 4 ಗ್ರಾಮದಲ್ಲಿ ಹಾಗೂ ಮಣ್ಣೆ ಗ್ರಾಪಂ ವ್ಯಾಪ್ತಿಯ ತಿಪ್ಪಶೆಟ್ಟಿಹಳ್ಳಿ, ತಾವರೆಕೆರೆ, ಹಾದಿಹೊಸಹಳ್ಳಿ, ಮುದ್ದಲಿಂಗನಹಳ್ಳಿ, ಗೊಲ್ಲರಹಟ್ಟಿ, ಬೀರಗೊಂಡನಹಳ್ಳಿ ಸೇರಿ 15 ಗ್ರಾಮದಲ್ಲಿ ಬೆಂಬಲಿಗರೊಂದಿಗೆ ಮತಯಾಚನೆ ಮಾಡಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಗುರುಪ್ರಕಾಶ್, ಮುಖಂಡರಾದ ಟಿ.ಆರ್.ರಾಜಣ್ಣ, ಕಾಂತರಾಜು, ತಿಮ್ಮೇಗೌಡ, ಲೋಕೇಶ್, ಮಂಜುನಾಥ್, ಭೋಜಣ್ಣ, ಬೈರೇಗೌಡ, ನಾರಾಯಣ್‌ಸ್ವಾಮಿ, ಆನಂದ್ ಮತ್ತಿತರರು ಇದ್ದರು.
ದೇವರಿಗೆ ವಿಶೇಷಪೂಜೆ:ನಗರದ ವೀವರ್ಸ್ ಕಾಲನಿಯ ಶಕ್ತಿದೇವತೆ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚನ್ನಪ್ಪಬಡಾವಣೆ, ಸುಭಾಷ್‌ನಗರದ, ಶೇಷುಬಡಾವಣೆ, ಬೈರವೇಶ್ವರ ಬಡಾವಣೆ, ವಿವರ‌್ಸಕಾಲನಿ ಹಾಗೂ ವಿವಿಧ ಬಡಾವಣೆಯಲ್ಲಿ ಮತಯಾಚನೆ ಮಾಡಲಾಯಿತು.