ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಬ್ರಿಟಿಷ್ ಕಾಲದಲ್ಲಿ ಆಸ್ತಿತ್ವಕ್ಕೆ ಬಂದ ಹುಬ್ಬಳ್ಳಿ ಜಿಮ್ಾನಾ ಕ್ಲಬ್ನ 125ನೇ ವರ್ಷಾಚರಣೆ ಕಾರ್ಯಕ್ರಮ ಜ. 26ರಂದು ಕ್ಲಬ್ನಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ವಿನಾಯಕ ಅಕಳವಾಡಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1899ರಲ್ಲಿ ಆರಂಭಗೊಂಡ ಕ್ಲಬ್ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮುದಾಯದ ಒಗ್ಗಟ್ಟನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 125ನೇ ವರ್ಷವನ್ನು ಸ್ಮರಣೀಯವಾಗಿಸಲು ನಿರ್ಧರಿಸಿದ್ದು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಅಂದು ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಸಂಜೆ 6 ಗಂಟೆಗೆ ಕ್ಲಬ್ ಡೇ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಜಗದೀಶ ಶೆಟ್ಟರ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ವಿಪ ಸದಸ್ಯ ಪ್ರದೀಪ ಶೆಟ್ಟರ ಹಾಗೂ ಮೇಯರ್ ರಾಮಣ್ಣ ಬಡಿಗೇರ ಭಾಗವಹಿಸುವರು. ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ವಾನ್ ಸುಜಯ ಶಾನಭಾಗ ಹಾಗೂ ಅಂಗವಿಕಲ ಶಾಸ್ತ್ರೀಯ ನೃತ್ಯಪಟು ಚೈತ್ರಾಲಿ ಚಿಲ್ಲಾಳ ನೃತ್ಯ ಪ್ರದರ್ಶನ ನೀಡುವರು. ಕಾರ್ಯಕ್ರಮಕ್ಕೆ ಕ್ಲಬ್ ಸದಸ್ಯರಿಗೆ ಮಾತ್ರ ಪ್ರವೇಶ ಇರುತ್ತದೆ ಎಂದು ವಿವರಿಸಿದರು.
ಸುಮಾರು 800 ಜನ ಕ್ಲಬ್ ಸದಸ್ಯರಿದ್ದು, 500 ಜನ ಭಾಗವಹಿಸುವ ನಿರೀಕ್ಷೆ ಇದೆ. ವಾರ್ಷಿಕೋತ್ಸವದ ಅಂಗವಾಗಿ ಕಳೆದ ಹಲವು ದಿನಗಳಿಂದ ಆರೋಗ್ಯ, ಕ್ಯಾನ್ಸರ್ ತಪಾಸಣಾ ಶಿಬಿರ, ಕ್ರಿಕೆಟ್ ಪಂದ್ಯಾವಳಿ, ಚೆಸ್, ಕೇರಂ, ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಪಂದ್ಯಾವಳಿ ಆಯೋಜಿಸಲಾಗಿತ್ತು. ನೃಪತುಂಗ ಬೆಟ್ಟದಲ್ಲಿ 125 ಜಾತಿಯ ವಿವಿಧ ಹಣ್ಣುಗಳ ಸಸಿಗಳನ್ನು ನೆಡಲಾಗಿದೆ. ಸದ್ಯದಲ್ಲೇ ಅವುಗಳ ಸಂರಕ್ಷಣೆಗೆ ಹನಿ ನೀರಾವರಿ ವ್ಯವಸ್ಥೆ ಮಾಡಲಿದ್ದೇವೆ ಎಂದರು.
ರೋಟರಿ ಕ್ಲಬ್ ಸಹಯೋಗದೊಂದಿಗೆ ತಡಸ ಗಾಯತ್ರಿ ತಪೋವನದಲ್ಲಿ ಆಯೋಜಿಸಿದ್ದ ಆರೋಗ್ಯ ಹಾಗೂ ಕ್ಯಾನ್ಸರ್ ರೋಗ ತಪಾಸಣೆ ಶಿಬಿರದಲ್ಲಿ 2000 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಂ.ಆರ್ . ಪಾಟೀಲ, ಶಂಕರ ಹಿರೇಮಠ, ವಿಷ್ಣು ಮೆಹರವಾಡೆ, ವಿಜಯ ಹಟ್ಟಿಹೊಳಿ ಇದ್ದರು.