

ಹನೂರು: ವಿಷ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆದರೂ ಇನ್ನು ಸಂಪೂರ್ಣ ಗುಣಮುಖರಾಗಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದೇವೆ. ಆದ್ದರಿಂದ ನಮಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಜತೆಗೆ ಸರ್ಕಾರ ನೀಡಿದ್ದ ಭರವಸೆಯನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಜಿಲ್ಲಾಡಳಿತ ಭವನ ಮುಂದೆ ವಿಷ ಸೇವಿಸಬೇಕಾಗುತ್ತದೆ ಎಂದು ಸುಳವಾಡಿ ಸಂತ್ರಸ್ಥರು ಒಕ್ಕೊರಲಿನಿಂದ ಎಚ್ಚರಿಸಿದರು.
ಸುಳವಾಡಿ ವಿಷ ಪ್ರಸಾದ ಸೇವನೆ ದುರಂತ ಘಟನೆಯಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿಸಿದ ಬಿದರಹಳ್ಳಿ ಗ್ರಾಮದ ಸ್ಮಶಾನದಲ್ಲಿ ಶನಿವಾರ ಸಂತಸ್ಥರು ಸಮಾಧಿಗೆ ಪುಷ್ಪನಮನ ಸಲ್ಲಿಸಿ ಭಾವೋದ್ರೇಕಕ್ಕೆ ಒಳಗಾಗಿ ಮಾತನಾಡಿದರು.
ವಿಷ ಪ್ರಸಾದ ಸೇವನೆಯಿಂದ ಕುಟುಂಬಸ್ಥರನ್ನು ಕಳೆದುಕೊಂಡಿದ್ದು, ತುಂಬಾ ಸಂಕಷ್ಟದಲ್ಲಿದ್ದೇವೆ. ಅಸ್ವಸ್ಥರಾಗಿದ್ದ ನಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದ್ದು, ಸರ್ಕಾರ ಪರಿಹಾರ ರೂಪದಲ್ಲಿ ನೀಡಿದ್ದ ಹಣವೆಲ್ಲಾ ಆಸ್ಪತ್ರೆಗೆ ಖರ್ಚಾಗಿದೆ. ಆದರೆ ಇನ್ನು ಸಹ ಅನಾರೋಗ್ಯದಿಂದ ಚೇತರಿಸಿಕೊಂಡಿಲ್ಲ. ನಿಶಕ್ತಿಯಿಂದ ಬಳಲುತ್ತಿದ್ದೇವೆ. ಆಗ್ಗಾಗ್ಗೆ ಜ್ವರ, ತಲೆನೋವು, ವಾಂತಿ ಕಾಣ ಸಿಕೊಳ್ಳುತ್ತಿದೆ.ಕಣ್ಣಿನ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ನರ ದೌರ್ಬಲ್ಯದಿಂದ ಯಾವುದೇ ಕೆಲಸ ಕಾರ್ಯದಲ್ಲೂ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಜೀವನ ನಡೆಸಲು ಪಡುಬಾರದ ಕಷ್ಟ ಪಡುತ್ತಿದ್ದೇವೆ. ಜತೆಗೆ ಚಿಕಿತ್ಸೆ ಪಡೆದಿದ್ದ ಮಾರಕ್ಕ ಎಂಬುವರು ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಕೆಲ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಗರ್ಭಪಾತದಿಂದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರಿಂದ ಸಾವಿನ ಭಯ ನಮ್ಮನ್ನು ಕಾಡುತ್ತಿದ್ದು, ಜೀವನದಲ್ಲಿ ನೆಮ್ಮದಿಯೇ ಇಲ್ಲವಾಗಿದೆ. ಜಿಲ್ಲಾಡಳಿತ ಅಗತ್ಯ ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿತ್ತು. ಆದರೆ ಸಮರ್ಪಕವಾಗಿ ನೀಡಲಿಲ್ಲ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದರೆ ನಮ್ಮಲ್ಲಿ ಹಣವಿಲ್ಲ. ಇದರಿಂದ ಇಂದಿಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇವೆ.
ಇತ್ತ ಅಂದಿನ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಸಾಂತ್ವನಾ ಸಭೆಗೆ ಆಗಮಿಸಿದ್ದ ವೇಳೆ ಮೃತಪಟ್ಟ ಕುಟುಂಬಗಳಿಗೆ 2 ಎಕರೆ ಜಮೀನು, ನಿವೇಶನ ಹಾಗೂ ಉದ್ಯೋಗವನ್ನು ದೊರಕಿಸಿ ಕೊಡಲಾಗುವುದು ಎಂದು ಭರವಸೆ ನೀಡಿದ್ದರು. 6 ವರ್ಷ ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಕುಟುಂಬಸ್ಥರನ್ನು ಕಳೆದುಕೊಂಡ ನಮಗೆ ಜೀವನ ನಡೆಸುವುದೇ ಕಷ್ಟವಾಗಿದೆ. ಮಕ್ಕಳನ್ನು ಸಾಕಿ ಸಲಹುವುದೇ ಸಮಸ್ಯೆಯಾಗಿದ್ದು, ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಸರ್ಕಾರ ಈ ಬಗ್ಗೆ ಮನಗಂಡು ನಮಗೆ ಅಗತ್ಯ ಚಿಕಿತ್ಸೆ ಕೊಡಿಸಬೇಕು. ಜತೆಗೆ ಸರ್ಕಾರ ನೀಡಿದ್ದ ಭರವಸೆಯನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಭವನ ಮುಂದೆ ಆಗಮಿಸಿ ವಿಷ ಸೇವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.