

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ನಕಾರಾತ್ಮಕ ವಿಷಯಗಳಿಗೆ ಚರ್ಚೆಯಾಗದೆ ಅದರ ಚುನಾವಣೆ ಸತ್ಯ, ಪ್ರಾಮಾಣಿಕವಾಗಿ ನಡೆಯುವಂತಾಗಲಿ ಎಂದು ಸಾಮಾಜಿಕ ಹೋರಾಟಗಾರ ಚಂದ್ರಶೇಖರ ಹಿರೇಮಠ ಹೇಳಿದರು.
ಹೈಕ ಶಿಕ್ಷಣ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಹಿಂದಿ ಪ್ರಚಾರ ಸಭೆಯಲ್ಲಿ ಭಾನುವಾರ ಏರ್ಪಡಿಸಿದ್ದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಆಮಿಷಗಳಿಗೆ ಬಲಿಯಾಗದೆ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಧೈರ್ಯವಾಗಿ ಮತ ನೀಡಿ ಗೆಲ್ಲಿಸಬೇಕು ಎಂದು ಕೋರಿದರು.
ಹಿರಿಯ ಸದಸ್ಯ ಡಾ.ಸುಭಾಷ ಶಹಾ ಮಾತನಾಡಿ, ದಿ.ಮಹಾದೇವಪ್ಪ ರಾಂಪುರೆ ಒಡನಾಡಿಯಾಗಿ ಆಡಳಿತ ಮಂಡಳಿ ಸದಸ್ಯರಾಗಿ ಮಾಡಿದ ಅನೇಕ ಕೆಲಸಗಳನ್ನು ಸ್ಮರಿಸಿದರು.
ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪುರ, ಶಿವರಾಜ ಪಾಟೀಲ್ ಮಹಾಗಾಂವ ಮಾತನಾಡಿ, ಚುನಾವಣೆಗಳು ಮೊದಲಿನ ರೀತಿ ನಡೆದು ಸಂಸ್ಥೆಯ ಘನತೆ ಹಾಗೂ ಗೌರವ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ಸಂಸ್ಥೆ ಸದಸ್ಯರಾದ ಡಾ.ಶರಣಗೌಡ ಪಾಟೀಲ್, ಡಾ.ಅವಂತಿ, ಡಾ.ವಿಜಯಕುಮಾರ, ಡಾ.ಶರಣಬಸಪ್ಪ ಹರವಾಳ, ಶಿವಶರಣಪ್ಪ ಸೀರಿ, ಬಿಲ್ಲಾಡ ಅನಿಸಿಕೆಗಳನ್ನು ಹಂಚಿಕೊಂಡರು.
ಬಸವರಾಜ ಭೀಮಳ್ಳಿ, ಜಿ.ಡಿ.ಅಣಕಲ್, ಬಸವರಾಜ ಕಾಮರಡ್ಡಿ ಮಾತನಾಡಿ, ಹಿರಿಯರು ಕಟ್ಟಿಬೆಳೆಸಿದ ಸಂಸ್ಥೆ ಈ ಭಾಗದ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಕೆಲಸ ಮಾಡಲಿ. ಸದಸ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಹೆಚ್ಚೆಚ್ಚು ನಡೆಯಲಿ ಎಂದು ಆಶಿಸಿದರು.
ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಾನು ಗೆದ್ದರೆ ಹೆಚ್ಚಿನ ಸಮಯ ಶಿಕ್ಷಣ ಸಂಸ್ಥೆ ಅಭಿವೃದ್ಧಿಗೆ ನೀಡಿ ಬಸವೇಶ್ವರ ಆಸ್ಪತ್ರೆ ಸುಧಾರಿಸಿ ಬೆಳೆಸುವುದಾಗಿ ಹೇಳಿದರು.
ಡಾ.ಆನಂದ ಗಾರಂಪಳ್ಳಿ ಸ್ವಾಗತಿಸಿದರು. ಡಾ.ವೀರಭದ್ರ ನಂದ್ಯಾಳ ವಂದಿಸಿದರು. ಸುಮಾರು ೩೦೦ ಸದಸ್ಯರು ಸಲಹೆ-ಸೂಚನೆ ವ್ಯಕ್ತಪಡಿಸಿದರು.