

ಹಾಸನ: ಎಚ್‌ಐವಿ ಒಂದು ಮಾರಕ ರೋಗವಾಗಿದ್ದು ಪ್ರಸ್ತುತ ಸಂದರ್ಭದಲ್ಲಿ ಜಗತ್ತಿನ ಬೃಹತ್ ಆರೋಗ್ಯ ಸಮಸ್ಯೆಯಾಗಿದೆ. ಇದನ್ನು ಹೇಗೆ ಪರಿಣಾಮಕಾರಿಯಾಗಿ ತಡೆಗಟ್ಟಬಹುದು, ಈ ರೋಗಕ್ಕೆ ಚಿಕಿತ್ಸೆ ಮತ್ತು ಆರೈಕೆ ಹೇಗೆ ಸಾಧ್ಯ ಎಂಬ ಬಗ್ಗೆ ಯುವ ಜನರಿಗೆ ತಿಳಿವಳಿಕೆ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಸಿ..ಯತೀಶ್ವರ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯತ್ರಣ ಮತ್ತು ಪ್ರತಿಬಂಧಕ ಘಟಕ, ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಹಾಗೂ ರಾಜೀವ್ ನರ್ಸಿಂಗ್ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಸಹಯೋಗದೊಂದಿಗೆ ಯುವ ಜನೋತ್ಸವದ ಅಂಗವಾಗಿ ಸೋಮವಾರ ನಡೆದ ಏಡ್ಸ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ರೆಡ್ ರಿಬ್ಬನ್ ಘಟಕದ ಸಂಚಾಲಕರಾದ ಡಾ.ಎನ್.ಎಸ್.ಶಶಿಕಲಾ, ಯುವ ಜನರಲ್ಲಿ ಏಡ್ಸ್ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಎಚ್‌ಐವಿ ಪಾಸಿಟಿವ್ ಜನರಿಗೆ ಆರೈಕೆ, ಚಿಕಿತ್ಸೆ ಬೆಂಬಲ ಹಾಗೂ ರೋಗ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ದೈನಂದಿನ ಜೀವನಕ್ಕೆ ಮರಳಲು ನೆರವಾಗಬೇಕು. ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಐಸಿಟಿಸಿ ಸಂಯೋಜಕರಾದ ಕೆ.ಎಚ್.ಮಂಜುಳಾ ಮಾತನಾಡಿ, ಎಚ್‌ಐವಿ ಪರೀಕ್ಷೆಯನ್ನು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ. ಎಚ್‌ಐವಿ ಸಹಾಯವಾಣಿ 1097ಕ್ಕೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ಎಚ್‌ಐವಿ ಪೀಡಿತರನ್ನು ನಾವು ಗೌರವ ಮತ್ತು ಸಹಾಯಭೂತಿಯಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜೀವ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಏಡ್ಸ್ ಜಾಗೃತಿ ಮೂಡಿಸುವ ಬೀದಿ ನಾಟಕಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ರಾಜೀವ್ ಕಾಲೇಜಿನ ಉಪನ್ಯಾಸಕ ದೇವರಾಜು, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಸಿ.ಎಸ್. ಹೇಮಲತಾ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೆೆ.ಎಸ್. ಪುನೀತ್, ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಪಿ. ಕವಿತಾ, ಹಾಗೂ ಕಾಲೇಜಿನ ವಿದ್ಯಾರ್ಥಿನಿಕರು ಭಾಗವಹಿಸಿದರು.