

ಚನ್ನರಾಯಪಟ್ಟಣ: ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಲ್ಲಿ ಆರೋಗ್ಯಯುತ ದೇಶ ನಿರ್ಮಾಣ ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ವೈದ್ಯ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜು ಮತ್ತು ಲಯನ್ಸ್ ಕ್ಲಬ್ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾ ಹಾಗೂ ಬೀದಿನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಏಡ್ಸ್ ರೋಗ ನಿಯಂತ್ರಣ ಮಾಡಲು ಜನಜಾಗೃತಿ ಶಿಬಿರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ರೋಗದ ಲಕ್ಷಣಗಳು ಗೋಚರಿಸಿದ ಕೂಡಲೇ ಯಾವುದೇ ಮುಜುಗರಕ್ಕೆ ಒಳಪಡದೆ ವೈದ್ಯರನ್ನು ಸಂಪರ್ಕಿಸಿ ಮುಕ್ತವಾಗಿ ಸಮಾಲೋಚಿಸಿ ಸೂಕ್ತ ಚಿಕಿತ್ಸೆ ಪಡೆದು ಪರಿಹಾರ ಕಂಡುಕೊಳ್ಳಬೇಕು. ನಿರ್ಲಕ್ಷ್ಯ ಮಾಡಿದ್ದಲ್ಲಿ ಸಂಪೂರ್ಣ ಕುಟುಂಬವೇ ರೋಗಗ್ರಸ್ತವಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರ ಎಚ್‌ಐವಿ ರೋಗಿಗಳಿಗೆ ಆತ್ಮಸ್ಥೈರ್ಯ ನೀಡಿ ಉಚಿತವಾಗಿ ಚಿಕಿತ್ಸೆ ನೀಡುವ ಕ್ರಮ ಕೈಗೊಂಡಿದೆ. ಇದೊಂದು ಮಾರಣಾಂತಿಕ ಕಾಯಿಲೆ. ಆದ್ದರಿಂದ ರೋಗ ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಆರೋಗ್ಯ ಇಲಾಖೆ. ವೈದ್ಯ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದಲ್ಲಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಎಚ್‌ಐವಿ ಬಗ್ಗೆ ಅರಿವು ಮೂಡಿಸಿದರು. ಇದರೊಂದಿಗೆ ವಿವಿಧೆಡೆ ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸಲಾಯಿತು.
ಪುರಸಭಾ ಅಧ್ಯಕ್ಷೆ ರಾಧಾ ಮಂಜುನಾಥ್, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೆಂಕಟೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಕಿಶೋರ್‌ಕುಮಾರ್, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ್, ಆರೋಗ್ಯ ಶೈಕ್ಷಣಾಧಿಕಾರಿ ಅನಿತಾ, ವೈದ್ಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಅರುಣ್‌ಕುಮಾರ್, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ವೈದ್ಯರು ಮತ್ತು ಸಿಬ್ಬಂದಿ ಇದ್ದರು.