ಎಚ್‌ಐವಿ, ಏಡ್ಸ್ ಬಗ್ಗೆ ಯುವಜನತೆ ಜಾಗೃತರಾಗಿ

02rajesh5
Published on

ಚಾಮರಾಜನಗರ: ಯುವಜನರು ಸೇರಿದಂತೆ ಪ್ರತಿಯೊಬ್ಬರು ಎಚ್‌ಐವಿ, ಏಡ್ಸ್ ಬಗ್ಗೆ ಜಾಗೃತರಾಗಿ ಸುಸ್ಥಿರ ಜೀವನ ನಡೆಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಚಿದಂಬರ ಸಲಹೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸ್ನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಎಸ್‌ಎಸ್‌ಎಸ್, ರೆಡ್ ರಿಬ್ಬನ್ ಕ್ಲಬ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಸಿಲ್ಕ್ ಸಿಟಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಬೈಕ್ ರ‌್ಯಾಲಿ ಉದ್ದೇಶಿಸಿ ಮಾತನಾಡಿದರು.

ಎಚ್‌ಐವಿ, ಏಡ್ಸ್ ತಡೆಗಟ್ಟಲು ತೀವ್ರಗೊಳಿಸಿದ ಐ.ಇ.ಸಿ. ಪ್ರಚಾರಾಂದೋಲನ 2025ರ ಕಾರ್ಯಕ್ರಮದಡಿ ಯುವಜನರು, ಎಲ್ಲಾ ವಯೋಮಾನದವರಿಗೆ ಹೆಚ್‌ಐವಿ, ಏಡ್ಸ್ ಕುರಿತು ಬೈಕ್ ರ‌್ಯಾಲಿ, ಮ್ಯಾರಥಾನ್, ಸೈಕಲ್ ಜಾಥಾ, ಇತರೆ ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ವ್ಯಾಪಕವಾಗಿ ಆಯೋಜಿಸಲಾಗುತ್ತಿದೆ. ಯುವಜನತೆ ಕ್ಷಣಿಕ ಸುಖದ ಆಸೆಗಾಗಿ ಎಚ್‌ಐವಿ, ಏಡ್ಸ್‌ನಂತಹ ಮಾರಕ ಕಾಯಿಲೆಗೆ ಒಳಗಾಗದೇ ಸುಸ್ಥಿರ ಜೀವನ ರೂಪಿಸಿಕೊಳ್ಳಬೇಕಾದ ಅವಶ್ಯವಿದೆ. ಈ ನಿಟ್ಟಿನಲ್ಲಿ ಯುವಕರು ತಾವು ಜಾಗೃತರಾಗಿ, ಇತರರಿಗೂ ಅರಿವು ಮೂಡಿಸಬೇಕು ಎಂದರು.

ಏಡ್ಸ್ ಎಂದರೇ ಹಿಂದಿನಂತೆ ಗಾಬರಿ ಬೀಳುವ ಅಗತ್ಯವಿಲ್ಲ. ಅದಕ್ಕಾಗಿ ಪರಿಣಾಮಕಾರಿ ಚಿಕಿತ್ಸಾ ಸೌಲಭ್ಯವಿದೆ. ಅಸುರಕ್ಷಿತ ಲೈಂಗಿಕ ಸಂಪರ್ಕ ಹಾಗೂ ರೋಗಿಗೆ ಚುಚ್ಚಿದ ಸೂಜಿ ಅಥವಾ ಸಿರಿಂಜ್‌ನಿಂದ ಹೆಚ್ಚಾಗಿ ಹರಡುವ ಏಡ್ಸ್ ಕಾಯಿಲೆ ಸಲಿಂಗಕಾಮದಿಂದಲೂ ಹೆಚ್ಚಾಗಿ ಹರಡುವ ಸಾಧ್ಯತೆ ಇದೆ. ಒಬ್ಬರು ಒಬ್ಬ ಸಂಗಾತಿಯೊಂದಿಗೆ ಸಂಪರ್ಕ ಹೊಂದುವ ಮನಸ್ಥಿತಿ ಪ್ರತಿಯೊಬ್ಬರಿಗೂ ಬರಬೇಕು. ಈ ಬಗ್ಗೆ ಸಮುದಾಯಿಕವಾಗಿ ತಿಳಿವಳಿಕೆ ನೀಡುವ ಅಗತ್ಯವಿದೆ ಎಂದು ತಿಳಿಸಿದರು.

ಎಚ್‌ಐವಿ, ಏಡ್ಸ್ ಜಾಗೃತಿ ಕೇವಲ ಇಲಾಖೆಯ ಕೆಲಸ ಮಾತ್ರವಲ್ಲ. ಸಾರ್ವಜನಿಕರು, ಸಂಘಸಂಸ್ಥೆಗಳು ಎಲ್ಲರೂ ಸೇರಿ ಒಂದು ತಂಡವಾಗಿ ಮಾಡುವ ಕೆಲಸವಾಗಿದೆ. ಜಾಗೃತಿಯೂ ಸಹ ಒಂದು ದಿನದ ಕಾರ್ಯಕ್ರಮವಾಗದೇ ನಿರಂತರವಾಗಬೇಕು. ಯಾವುದೇ ವ್ಯಕ್ತಿ ಎಚ್‌ಐವಿ ಬಗ್ಗೆ ಅನುಮಾನವಿದ್ದರೆ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಅಧಿಕಾರಿ ಡಾ.ರವಿಕುಮಾರ್, ಸಿಮ್ಸ್ ಆರ್.ಎಂ.ಒ ಡಾ.ಮಹೇಶ್, ಅರ್ಥೋಪೆಡಿಕ್ ಮುಖ್ಯಸ್ಥ ಡಾ.ಮಾರುತಿ, ರಕ್ತನಿಧಿ ಕೇಂದ್ರದ ಮಹದೇವಪ್ರಸಾದ್, ಆರೋಗ್ಯ ಶಿಕ್ಷಣ ಅಧಿಕಾರಿ ದೊರೆಸ್ವಾಮಿ ನಾಯಕ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net