ಎಚ್‌ಎಂಪಿವಿ ಬಗ್ಗೆ ಬೇಡ ಆತಂಕ

dvg-G.M.-Gangadhara-swamy.jpg
Published on

ದಾವಣಗೆರೆ  : ಹ್ಯೂಮನ್ ಮೆಟಾಪ್ನೋಮೋ ವೈರಸ್ (ಎಚ್‌ಎಂಪಿವಿ) ಕುರಿತು ಸಾರ್ವಜನಿಕರಿಗೆ ಆತಂಕ ಬೇಡ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.  ಜಿಲ್ಲೆಯಲ್ಲಿ ಎಚ್‌ಎಂಪಿವಿ ವೈರಾಣು ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರು ಅನುಸರಿಸಬೇಕು. ಉಸಿರಾಟದ ಸಮಸ್ಯೆ ವೈರಸ್‌ಗಳಂತೆಯೇ ಚಳಿಗಾಲದಲ್ಲಿ ಶೀತ ಮತ್ತು ಜ್ವರದಂಥ ರೋಗ ಲಕ್ಷಣಗಳನ್ನು ವಿಶೇಷವಾಗಿ ಕಿರಿಯ ಮತ್ತು ಹಿರಿಯ ವಯಸ್ಸಿನವರಲ್ಲಿ ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.  ಬೆಂಗಳೂರಿನ ಖಾಸಗಿ ಆರೋಗ್ಯ ಕೇಂದ್ರದಲ್ಲಿ ಸಾಮಾನ್ಯ ಪರೀಕ್ಷೆಯ ಸಮಯದಲ್ಲಿ ಎರಡು ಎಚ್‌ಎಂಪಿವಿ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. 1 ಕೇಸ್ ಈಗಾಗಲೇ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಈ ಎರಡೂ ಪ್ರಕರಣಗಳು ಸೌಮ್ಯ ಸ್ವಭಾವದವು ಮತ್ತು ಯಾವುದೇ ಅಂತಾರಾಷ್ಟ್ರೀಯ ಪ್ರಯಾಣ ಇತಿಹಾಸವನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ.  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯದಲ್ಲಿ ಶೀತ, ಜ್ವರದಂಥ ಸಾಮಾನ್ಯ ಮತ್ತು ತೀವ್ರತರಹದ ಸೋಂಕಿನಂತಹ ಚಾಲ್ತಿಯಲ್ಲಿರುವ ಉಸಿರಾಟದ ಸೋಂಕುಗಳ ಡೇಟಾವನ್ನು ವಿಶ್ಲೇಷಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2024ರ ಡಿಸೆಂಬರ್‌ನಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿಲ್ಲ ಎಂದಿದ್ದಾರೆ.  ...  (ಬಾಕ್ಸ್)  ರೋಗ ಲಕ್ಷಣಗಳು  ಎಚ್‌ಎಂಪಿವಿ ಕೆಮ್ಮು, ಜ್ವರ, ಮೂಗು ಕಟ್ಟುವಿಕೆ ಮತ್ತು ಉಸಿರಾಟದ ತೊಂದರೆ ಸೇರಿದಂತೆ ಜ್ವರ ತರಹದ ರೋಗ ಲಕ್ಷಣಗಳನ್ನು ಉಂಟು ಮಾಡುತ್ತದೆ. ಹೆಚ್ಚು ತೀವ್ರತರವಾದ ಪ್ರಕರಣಗಳಲ್ಲಿ ಇದು ಶ್ವಾಸನಾಳ ಮತ್ತು ಶ್ವಾಸಕೋಶದ ಸೋಂಕಿಗೆ ಕಾರಣವಾಗಬಹುದು. ವಿಶೇಷವಾಗಿ ಇದು ಚಿಕ್ಕ ಮಕ್ಕಳು, ವೃದ್ಧರು ಮತ್ತು ರೋಗ ನಿರೋಧಕ ಶಕ್ತಿ ಹೊಂದಿರದ ವ್ಯಕ್ತಿಗಳಲ್ಲಿ ಕಂಡುಬರುತ್ತದೆ.  ಉಸಿರಾಟದ ಹನಿಗಳು, ನಿಕಟ ವೈಯಕ್ತಿಕ ಸಂಪರ್ಕ ಮತ್ತು ವೈರಸ್‌ನಿಂದ ಕಲುಷಿತಗೊಂಡ ಮೈಕೈ ಸ್ಪರ್ಶಿಸಿದ ನಂತರ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಮುಟ್ಟಿದರೆ ಹರಡಬಹುದು.  ಭಾರತ ಸರ್ಕಾರ ಮತ್ತು ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ. ಇತ್ತೀಚಿನ ಮಾಹಿತಿಯಂತೆ ದೇಶದಲ್ಲಿ ಎಚ್‌ಎಂಪಿವಿ ಪ್ರಕರಣಗಳಲ್ಲಿ ಯಾವುದೇ ಗಣನೀಯ ಏರಿಕೆ ಕಂಡುಬಂದಿಲ್ಲ.  ...  (ಬಾಕ್ಸ್)  ಮುಂಜಾಗ್ರತಾ ಕ್ರಮಗಳು  ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂಪೇಪರ್‌ನಿಂದ ಮುಚ್ಚಿಕೊಳ್ಳಿ. ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್‌ನಿಂದ ಹೆಚ್ಚಾಗಿ ತೊಳೆಯಿರಿ.  ಫ್ಲೂ, ಐ.ಎಲ್.ಐ.ನ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಹೊಂದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಸಾಕಷ್ಟು ನೀರು ಕುಡಿಯಿರಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ. ರಾಜ್ಯ ಆರೋಗ್ಯ ಇಲಾಖೆ ಸಮನ್ವಯದಿಂದ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು ಇದಕ್ಕೆ ಭಯಪಡುವ ಅವಶ್ಯಕತೆ ಇಲ್ಲ ಎಂದು ಡಿಸಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net