

ದೊಡ್ಡಬಳ್ಳಾಪುರ: ಕರೊನಾ ಮೊದಲ ಮತ್ತು 2ನೇ ಅಲೆ ಸಂದರ್ಭದಲ್ಲಿ ಕೋವಿಡ್ ಸೇನಾನಿಗಳಾಗಿ ಕಾರ್ಯನಿರ್ವಹಿಸಿದ ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿಯ ನಿರಂತರ ಪರಿಶ್ರಮದಿಂದ ಸೋಂಕು ಗೆಲ್ಲಲು ಸಾಧ್ಯವಾಗಿದೆ ಎಂದು ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.
ನಗರದ ದತ್ತಾತ್ರೇಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಣೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಜಿಲ್ಲಾಸ್ಪತ್ರೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ ವಿರುದ್ಧ ಏಕವಚನದಲ್ಲಿ ಹರಿಹಾಯ್ದ ಎಸ್.ಆರ್. ವಿಶ್ವನಾಥ್, ಅವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. 2008ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗಲೂ ನಾನು ನನ್ನನ್ನು ಮಂತ್ರಿ ಮಾಡಿ ಎಂದು ಕೇಳಲಿಲ್ಲ. ಅಧಿಕಾರಕ್ಕಾಗಿ ನಾನು ಪಕ್ಷದಲ್ಲಿ ಕೆಲಸ ಮಾಡುತ್ತಿಲ್ಲ. ಆದರೆ ಎಚ್.ವಿಶ್ವನಾಥ್‌ಗೆ ಅಧಿಕಾರಬೇಕು. ಹೀಗಾಗಿ ಮಾನಸಿಕವಾಗಿ ಜರ್ಜರಿತವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯರಾಗಿರುವ ಎಚ್.ವಿಶ್ವನಾಥ್ ದಾಖಲೆ ಸಮೇತ ಮಾತನಾಡಬೇಕು. ನನ್ನ ವಿರುದ್ಧ ವೈಯಕ್ತಿಕವಾಗಿ ಕೆಟ್ಟ ಪದ ಬಳಸಿದ್ದರಿಂದ ನಾನು ಮಾತನಾಡಲೇಬೇಕಾಯಿತು. ನಾನು ಆಗಿದ್ದಕ್ಕೆ ಸಹಿಸಿಕೊಂಡಿದ್ದೇನೆ. ಇಷ್ಟೆಲ್ಲ ಆದರೂ ಅವರ ಹುಚ್ಚು ಬಿಟ್ಟಿಲ್ಲ. ಅವರ ರಾಜಕೀಯ ಅಸ್ತಿತ್ವ ಬಿಜೆಪಿಯಲ್ಲೇ ಕೊನೆಯಾಗಲಿದೆ. ವರಿಷ್ಠರು ಸೂಚನೆ ನೀಡಿದರೂ ಮತ್ತೆ ಸುದ್ದಿಗೋಷ್ಠಿ ಮಾಡಿದ್ದಾರೆ. ನಾಳೆ ಅಥವಾ ನಾಡಿದ್ದು ಅವರ ಮನೆಯವರೇ ಅವರನ್ನು ನಿಮ್ಹಾನ್ಸ್‌ಗೆ ದಾಖಲಿಸಿದರೂ ಅಚ್ಚರಿಪಡಬೇಕಾಗಿಲ್ಲ ಎಂದು ಕಿಡಿಕಾರಿದರು.
ಬಿಡಿಎಯಲ್ಲಿ ಲೂಟಿ ಮಾಡಿದವರನ್ನು ಜೈಲಿಗೆ ಕಳುಹಿಸಿದ್ದೇನೆ. ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಬಿಡಿಎಯನ್ನು ಸ್ವಚ್ಛ ಮಾಡುತ್ತಿದ್ದೇನೆ. ಯಾವುದೇ ಸಾಲ ಪಡೆಯದೆ ಮೊದಲ ಬಾರಿಗೆ 2,800 ಕೋಟಿ ರೂ. ಬಜೆಟ್ ಮಾಡಿದ್ದೇನೆ. ಇನ್ನು ಆರೇಳು ತಿಂಗಳಲ್ಲಿ ಬಿಡಿಎ ಆರ್ಥಿಕ ಸ್ಥಿತಿ ಸುಧಾರಿಸುವಂತೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಪದಾಧಿಕಾರಿಗಳಾದ ಕೆ.ಎಂ. ಹನುಮಂತರಾಯಪ್ಪ, ಟಿ.ಎನ್.ನಾಗರಾಜು, ಶಿವಶಂಕರ್, ಧೀರಜ್ ಮುನಿರಾಜು, ವೆಂಕಟೇಶ್, ಲಗ್ಗೆರೆ ನಾರಾಯಣಸ್ವಾಮಿ, ಜೋ.ನಾ. ಮಲ್ಲಿಕಾರ್ಜುನ, ಆನಂದಮೂರ್ತಿ, ಸುಬ್ಬರಾಜು, ತಾಲೂಕು ವೈದ್ಯಾಧಿಕಾರಿ ಡಾ. ಪರಮೇಶ್ವರ ಮತ್ತಿತರರಿದ್ದರು.