ಎಚ್.ಡಿ. ರೇವಣ್ಣ ಕುಟುಂಬದ ವಿರುದ್ಧ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಗುಡುಗು

ಎಚ್.ಡಿ. ರೇವಣ್ಣ ಕುಟುಂಬದ ವಿರುದ್ಧ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಗುಡುಗು
Published on

ಹಾಸನ: ಅಧಿಕಾರದ ದುರಂಕಾರ, ಹಣದ ಮದ ಪಿತ್ತ ನೆತ್ತಿಗೆ ಏರಿದರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಜಿಲ್ಲೆಯಲ್ಲಿ ನಡೆದಿರುವ ಘಟನೆ ಸಾಕ್ಷಿ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಕುಟುಂಬದ ವಿರುದ್ಧ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಗುಡುಗಿದರು.
ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಆ ಪ್ರಕರಣದ ಬಗ್ಗೆ ನಾಲ್ಕು ತಿಂಗಳ ಹಿಂದೆಯೇ ನಾನು ಸಂಕ್ಷಿಪ್ತವಾಗಿ ಹೇಳಿದ್ದೆ. ಯಾರೋ ಒಬ್ಬರು ಅಶ್ಲೀಲ ಚಿತ್ರ ನನಗೆ ತೋರಿಸಲು ಬಂದಿದ್ದರು, ಈ ಕಣ್ಣಲ್ಲಿ ನೋಡಲ್ಲ, ಕಿವಿಯಲ್ಲಿ ಕೇಳಲ್ಲ ಅಂದಿದ್ದೆ.ಅದನ್ನು ಪಬ್ಲಿಶ್ ಮಾಡುವುದರಿಂದ ನೂರಾರು ಕುಟುಂಬಗಳು ಬೀದಿಗೆ ಬರ್ತವೆ ಎಂದು ಬೇಸರ ಹೊರ ಹಾಕಿದರು.
ಇದರಿಂದ ಸಾಮಾಜಿಕ ಸ್ವಾಸ್ಥ್ಯ ಕೆಡುತ್ತೆ ಅಂತ ಹೇಳಿದ್ದೆ, ಜವಾಬ್ದಾರಿ ಇರುವ ಹಿರಿಯರು ಅದನ್ನು ಗಮನಿಸಬೇಕಿತ್ತು. ಒಳ್ಳೆಯ ಮಾತುಗಳನ್ನು ಕೇಳುವುದಿಲ್ಲ. ಕೊನೆ ಕಾಲದಲ್ಲಿ ಕೇಡು ಬಂತು ಅಂತ ಗಾದೆ ಹೇಳ್ತಾರೆ.ಈ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು, ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕು. ತಪ್ಪಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಇದರಲ್ಲಿ ರಾಜಕೀಯವನ್ನು ಬೆರೆಸಬಾರದು ಎಂದು ಒತ್ತಾಯಿಸಿದರು.
ಈ ನೆಲದ ಕಾನೂನಿನಂತೆ ಎಲ್ಲರೂ ನಡೆದುಕೊಳ್ಳಬೇಕು. ಅದನ್ನು ಆಡಳಿತ ನಡೆಸುವವರು ಎತ್ತಿ ಹಿಡಿಯುತ್ತಾರೆ ಎಂದು ಭಾವಿಸಿದ್ದೇನೆ.
ಮಾಜಿ ಮುಖ್ಯಮಂತ್ರಿಗಳು ಹಾಸನಕ್ಕೆ ಬಂದಾಗ ಅವರು ರೇವಣ್ಣ ಅವರ ಮಗ ಅಲ್ಲ, ನನ್ನ ಮಗ, ತಪ್ಪಿದ್ದರೆ ಕ್ಷಮಿಸಿ, ಆಶೀರ್ವಾದ ಮಾಡಿ ಅಂತ ಕೇಳಿದರು.ಈಗ ನಮ್ಮ ಕುಟುಂಬವೇ ಬೇರೆ, ಅವರ ಕುಟುಂಬವೇ ಬೇರೆ ಅಂತ ಹೇಳ್ತಾರೆ. ಈ ರೀತಿಯ ಮಾತುಗಳು ಘಳಿಗೆಗೆ ತಕ್ಕಂತೆ, ಸಂದರ್ಭಕ್ಕೆ ತಕ್ಕಂತೆ ಬದಲಾಗಬಾರದು. ನಾಯಕರು ಮಾತಿನಂತೆ ನಡೆದುಕೊಳ್ಳಬೇಕು ಎಂದರು.
ಇದರಲ್ಲಿ ವೈಯುಕ್ತಿಕ ಪ್ರತಿಷ್ಠೆ ಬೆಳೆಸಿಕೊಳ್ಳಬಾರದು. ತಪ್ಪು ಇಲ್ಲ ಅಂದರೆ ಯಾರೂ ಈ ರೀತಿ ಫೇಕ್ ಮಾಡಿ ವೈರಲ್ ಮಾಡಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ. ತುರ್ತಾಗಿ ಸಮಗ್ರ ತನಿಖೆ ನಡೆಯಬೇಕು. 2019 ರಲ್ಲಿ ನಡೆದ ಅಭ್ಯರ್ಥಿ ಆಯ್ಕೆ ಸಭೆಯಲ್ಲಿ ನಾನು ಪ್ರಜ್ವಲ್‌ರೇವಣ್ಣ ಹೆಸರು ಹೇಳಲಿಲ್ಲ. ಅದಕ್ಕೆ ನಮ್ಮ ಮೇಲೆ ಕೆಲವರು ಗುರ್ ಎಂದರು. ಸತ್ಯ ಕೆಲವರಿಗೆ ಹಿಡಿಸುವುದಿಲ್ಲ, ಹೊಗಳುಭಟ್ಟರು ಬೇಕು, ಅದಕ್ಕೆ ಅನುಭವಿಸಬಾರದ್ದನ್ನು ಅನುಭವಿಸುತ್ತಿದ್ದಾರೆ. ಇದನ್ನು ಎದುರಿಸುವ ಶಕ್ತಿಯನ್ನು ದೇವರು ಆ ಹಿರಿಯ ಮುತ್ಸದ್ದಿಗೆ ಕೊಡಲಿ,
ಯಾರೇ ಆಗಿದ್ದರೂ ತಪ್ಪು ಮಾಡಿದವರ ಮೇಲೆ ಕ್ರಮ ಆಗಬೇಕು ಎಂದರು.
ರಾವಣನಿಗೆ ಪರಮೇಶ್ವರನು ಕೊಟ್ಟ ಶಕ್ತಿ, ಸಕಲ ಐಶ್ವರ್ಯಗಳು ಇದ್ದವು. ಆದರೆ ಅಂತಿಮವಾಗಿ ಏನಾದ, ನಾಶವಾಗಲಿಲ್ಲವಾ. ಸಿಕ್ಕಿದಂತಹ ಅಧಿಕಾರವನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು. ಅಧಿಕಾರದ ದುರಂಹಂಕಾರ, ಹಣದ ಮದದ ಪಿತ್ತ ಏರಿ ಇವೆಲ್ಲಾ ಆಗಿದೆ ಎಂದು ಅಸಮಾಧಾನ ಹೊರ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net