ಎಚ್.ಡಿ. ರೇವಣ್ಣ ಆಪ್ತನ ಕೊಲೆಗೆ ಯತ್ನ:ಕೂದಲೆಳೆ ಅಂತರದಲ್ಲಿ ಪಾರಾದ ಅಶ್ವತ್ಥ್ ಗೌಡ

ಎಚ್.ಡಿ. ರೇವಣ್ಣ ಆಪ್ತನ ಕೊಲೆಗೆ ಯತ್ನ:ಕೂದಲೆಳೆ ಅಂತರದಲ್ಲಿ ಪಾರಾದ ಅಶ್ವತ್ಥ್ ಗೌಡ
Published on

ಹಾಸನ : ಶಾಸಕ ಎಚ್.ಡಿ. ರೇವಣ್ಣ ಅವರ ಆಪ್ತರಾಗಿರುವ ಗುತ್ತಿಗೆದಾರ ಅಶ್ವತ್ಥ್ ಗೌಡ ಅವರ ಮಂಗಳವಾರ ರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ಅಶ್ವತ್ಥ್ ಗೌಡ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಇಲಾಖೆ ತನಿಖೆಯನ್ನು ಚುರುಕುಗೊಳಿಸಿದ್ದು ಆರೋಪಿಗಳ ಬಗ್ಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ.

ಎರಡು ತಿಂಗಳ ಹಿಂದೆ ಗ್ರಾನೈಟ್ ಉದ್ಯಮಿ ಹಾಗೂ ಎಚ್.ಡಿ. ರೇವಣ್ಣ ಅವರ ಆಪ್ತರಾಗಿದ್ದ ಕೃಷ್ಣೇಗೌಡ ಅವರ ಕೊಲೆ ಮಾಸುವ ಮುನ್ನವೇ ಮತ್ತೊರ್ವ ಆಪ್ತನ ಕೊಲೆಗೆ ಯತ್ನ ನಡೆದಿರುವುದು ಕುತೂಹಲದ ಜತೆಗೆ ಆತಂಕವನ್ನು ಮೂಡಿಸಿದೆ.

ಅಶ್ವತ್ಥ್ ಗೌಡ ಮಂಗಳವಾರ ಸಂಜೆ ಹಾಸನದಿಂದ ರೇವಣ್ಣ ಅವರ ಕಾರಿನಲ್ಲಿ ಹೊಳೆನರಸೀಪುರಕ್ಕೆ ಹೋಗಿ, ರೇವಣ್ಣ ಅವರ ಮನೆಯಲ್ಲಿ ಸ್ವಲ್ಪ ಸಮಯ ಕಳೆದು ರಾತ್ರಿ 8.30ಕ್ಕೆ ತಮ್ಮ ಊರು ಚನ್ನರಾಯಪಟ್ಟಣಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಸೂರನಹಳ್ಳಿ ಹಂಪ್ ಕಾರನ್ನು ನಿಧಾನ ಮಾಡಿದಾಗ ಏಕಾಏಕಿ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಅಶ್ವತ್ಥ್ ಗೌಡ ಅವರು ಕಾರನ್ನು ರಿವರ್ಸ್‌ನಲ್ಲಿ ಚಲಾಯಿಸಿಕೊಂಡು ಹೋಗಿದ್ದಾರೆ. ಮೂಡಲಹಿಪ್ಪೆವರೆಗೂ ದುಷ್ಕರ್ಮಿಗಳು ಕಾರನ್ನು ಹಿಂಬಾಲಿಸಿಕೊಂಡು ಬಂದು ನಂತರ ಪರಾರಿಯಾಗಿದ್ದಾರೆ ಎಂದು ಅಶ್ವತ್ಥ್ ಗೌಡ ಅವರು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸೂಕ್ತ ತನಿಖೆಗೆ ಎಚ್.ಡಿ. ರೇವಣ್ಣ ಆಗ್ರಹ

ಮಂಗಳವಾರ ರಾತ್ರಿ ಗುತ್ತಿಗೆದಾರ ಚನ್ನರಾಯಪಟ್ಟಣದ ಅಶ್ವತ್ಥ್ ಕಾರನ್ನು ಸೂರನಹಳ್ಳಿ ಸಮೀಪ ಅಡ್ಡಗಟ್ಟಲು ಯತ್ನಿಸಿದ್ದಾರೆ. ದರೋಡೆ ಮಾಡುವ ಉದ್ದೇಶದಿಂದ ದಾಳಿ ಮಾಡಿದ್ದಾರೋ ಅಥವಾ ಕೊಲೆ ಮಾಡುವ ಉದ್ದೇಶದಿಂದ ದಾಳಿ ಮಾಡಿದ್ದಾರೋ ಗೊತ್ತಿಲ್ಲ ಎಂದು ಎಚ್.ಡಿ. ರೇವಣ್ಣ ಹೇಳಿದರು.

ಈ ವಿಷಯವಾಗಿ ಬುಧವಾರ ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ಮಧ್ಯಾಹ್ನದಿಂದ ಅಶ್ವತ್ಥ್ ಗೌಡ ನನ್ನ ಜೊತೆಯಲ್ಲೇ ಇದ್ದರು. ಹಾಸನದಿಂದ ಹೊಳೆನರಸೀಪುರಕ್ಕೆ ಜತೆಯಲ್ಲೇ ಬಂದೆವು. ನಂತರ ಆತ ಚನ್ನರಾಯಪಟ್ಟಣಕ್ಕೆ ತೆರಳಿದರು. ಸೂರನಹಳ್ಳಿ ಸಮೀಪ ಬೇರೊಂದು ಕಾರಿನಿಂದ ಅಶ್ವತ್ಥ್ ಕಾರು ಅಡ್ಡ ಹಾಕಿದ್ದಾರೆ. ಅಪಾಯ ಗ್ರಹಿಸಿದ ಅಶ್ವತ್ಥ್ ತಕ್ಷಣ ಕಾರನ್ನು ಹಿಂದಕ್ಕೆ ತೆಗೆದುಕೊಂಡು ಸ್ವಲ್ಪ ದೂರ ಹಿಂದೆ ಹೋಗಿ ಮತ್ತೆ ಜೋರಾಗಿ ಮುಂದಕ್ಕೆ ಹೋಗಿದ್ದಾರೆ. ಮುಂದಕ್ಕೆ ಹೋಗುವಾಗ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಕಾರಿನ ಗಾಜು ಒಡೆದು ಹೋಗಿದೆ. ಅಶ್ವತ್ಥ್ ಸಮಯ ಪ್ರಜ್ಞೆಯಿಂದ ಪಾರಾಗಿದ್ದಾರೆ. ಇಲ್ಲದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ದುಷ್ಕರ್ಮಿಗಳ ವಿವರವನ್ನು ಈಗಾಗಲೇ ನಮ್ಮ ಹುಡುಗರು ಪೊಲೀಸರಿಗೆ ನೀಡಿದ್ದಾರೆ. ಅಲ್ಲದೆ ಸಿಸಿ ಟಿವಿಯಲ್ಲಿ ಕೂಡ ಕಾರುಗಳ ದೃಶ್ಯ ಸೆರೆಯಾಗಿದೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. ಕೂಡಲೇ ಇದರ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು. ನೂತನವಾಗಿ ಬಂದಿರುವ ಪೊಲೀಸ್ ವರಿಷ್ಠಾಧಿಕಾರಿಗಳು ಯಾವ ರೀತಿ ತನಿಖೆ ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇನೆ. ತನಿಖೆ ಜತೆಗೆ ನನ್ನ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರಿಗೂ ಕೂಡ ಭದ್ರತೆ ಕೊಡುವಂತೆ ಕೇಳಿಕೊಂಡಿದ್ದೇನೆ. ಏಕೆಂದರೆ ಅವನ ತೋಟ ಇರುವುದು ಅದೇ ಜಾಗದಲ್ಲಿ. ನಾನೂ ಈ ಮಾರ್ಗದಲ್ಲಿ ಆಗಾಗ ಗನ್ನಿಕಡದ ನನ್ನ ಮಗನ ಜಮೀನಿಗೆ ಹೋಗುತ್ತಿರುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net