ಎಚ್.ಡಿ.ರೇವಣ್ಣ ಅವರ ಬಂಧನ ರಾಜಕೀಯ ಷಡ್ಯಂತ್ರ:ಶಾಸಕ ಎಚ್.ಪಿ.ಸ್ವರೂಪ್

ಎಚ್.ಡಿ.ರೇವಣ್ಣ ಅವರ ಬಂಧನ ರಾಜಕೀಯ ಷಡ್ಯಂತ್ರ:ಶಾಸಕ ಎಚ್.ಪಿ.ಸ್ವರೂಪ್
Published on

ಹಾಸನ: ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಬಂಧಿಸುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಶಾಸಕ ಎಚ್.ಪಿ.ಸ್ವರೂಪ್ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ಕಳದ ಒಂದು ವಾರದಿಂದ ಊರಿನಲ್ಲಿ ಇರಲಿಲ್ಲ. ಭಾನುವಾರ ರೇವಣ್ಣ ಅವರನ್ನು ಭೇಟಿಯಾಗಲು ತೆರಳಿದ್ದೆ ಆದರೆ,ಪೊಲೀಸರು ಅವಕಾಶ ಕೊಡಲಿಲ್ಲ. ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.
ಪೆನ್‌ಡ್ರೈವ್ ಹಂಚಿಕೆ ಸಂಬಂಧ ಮಾಜಿ ಶಾಸಕರ ಆಪ್ತರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇದ್ನನೆಲ್ಲ ಗಮನಿಸಿದರೆ ಇದರ ಹಿಂದೆ ದೊಡ್ಡವರ ಕೈವಾಡ ಇರಬಹುದು. ಆದ್ದರಿಂದ ಎಸ್‌ಐಟಿಯಿಂದ ನ್ಯಾಯ ಸಿಗುವ ವಿಶ್ವಾಸವಿಲ್ಲ. ಸರ್ಕಾರ ತಕ್ಷಣವೇ ಸಿಬಿಐಗೆ ವಹಿಸುವ ಮೂಲಕ ಸತ್ಯಾಸತ್ಯತೆ ಬಯಲಿಗೆಳೆಯಬೇಕು ಒತ್ತಾಯಿಸಿದರು.
ಪೆನ್ ಡ್ರೈವ್ ಅಶ್ಲೀಲ ವೀಡಿಯೋ ಪ್ರಕರಣ ನಿಷ್ಪಕ್ಷಪಾತ ತನಿಖೆ ಆಗಬೇಕು.ಹಾಗೆಯೇ ಪೆನ್ ಡ್ರೈವ್ ಹಂಚಿಕೆ ಮಾಡಿದವರಿಗೆ ಕಠಿಣ
ಶಿಕ್ಷೆ ಆಗಬೇಕು. ಎಫ್‌ಐಅರ್ ದಾಖಲಾಗಿರುವ ಎಲ್ಲಾ ಆರೋಪಿಗಳನ್ನು ಕೊಡಲೇ ಬಂಧಿಸಬೇಕು.ಈ ಪ್ರಕರಣದಿಂದ ರಾಜ್ಯದಲ್ಲಿಯೇ ಜಿಲ್ಲೆಯ ಗೌರವವಕ್ಕೆ ಧಕ್ಕೆ ತಂದಿದೆ. ಹಲವು ಕುಟುಂಬಗಳಿಗೆ ಅನ್ಯಾಯವಾಗಿದ್ದು, ಪೆನ್ ಡ್ರೈವ್ ಹಂಚಿಕೆ ಸಂಬಂಧ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಆಗ್ರಹಿಸಿದರು.
ಮಗುವಿನಂತಹ ಮನಸ್ಸಿನ ರೇವಣ್ಣ ಅವರು ಮಹಿಳೆಯನ್ನು ಅಪಹರಿಸುವ ಕೆಳಮಟ್ಟಕ್ಕೆ ಇಳಿಯುವುದಿಲ್ಲ. ಸರ್ಕಾರ ತರಾತುರಿಯಲ್ಲಿ ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸಿದೆ. ಸಂತ್ರಸ್ತ ಮಹಿಳೆಯೇ ತನ್ನ ಅಪಹರಣವಾಗಿಲ್ಲ ಎಂದು ಹೇಳಿದ್ದಾರೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ಬಂಧನವಾಗಿದ್ದು, ಎಸ್‌ಐಟಿ ಅಧಿಕಾರಿಗಳ ಮೇಲೆ ವಿಶ್ವಾಸ ಇಲ್ಲವಾಗಿದೆ ಎಂದು ಹೇಳಿದರು.
ಪ್ರಜ್ವಲ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್‌ಡ್ರೈವ್‌ಗಳು ಹಂಚಿಕೆಯಾಗಿದ್ದು ಹೇಗೆ ಎಂಬುದರ ಪರಿಶೀಲನೆ ಆಗಬೇಕು. ಸಂಸದರ ಮಾಜಿ ಕಾರು ಚಾಲಕ ಕಾರ್ತಿಕ್‌ನಿಂದಲೇ ವಿಡಿಯೋಗಳು ಹರಿದಾಡುತ್ತಿರುವುದರಿಂದ ಆತನನ್ನು ವಿಚಾರಿಸಬೇಕು. ಜಿಲ್ಲೆಯ ಮಹಿಳೆಯರ ಮಾನದ ಪ್ರಶ್ನೆಯಾಗಿರುವುದರಿಂದ ಸಂಸದ ಪ್ರಜ್ವಲ್ ತಪ್ಪು ಮಾಡಿದ್ದರೆ ಅವರಿಗೂ ಶಿಕ್ಷೆಯಾಗಲಿ. ಆದರೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಎಳೆದು ತಂದಿರುವುದು ಸರಿಯಾದ ಕ್ರಮವಲ್ಲ ಎಂದರು.
ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಜೊತೆಗೆ ಯಾವುದೇ ರೀತಿಯ ಸಂಪರ್ಕ ಇರಲಿಲ್ಲ. ಈ ಹಿಂದೆ ನನ್ನ ಬಗ್ಗೆಯೂ ಅವರು ಲಘುವಾಗಿ ಮಾತನಾಡಿದ್ದರು. ಹೀಗಾಗಿ ಅವರ ಕುರಿತು ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net