ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಹಾಸನದ ಶಾಸಕರು, ಮತ್ತು ಮುಖಂಡರು

ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಹಾಸನದ ಶಾಸಕರು, ಮತ್ತು ಮುಖಂಡರು
Published on

ಹಾಸನ: ಸ್ಥಳೀಯ ಕ್ಷೇತ್ರದ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಅವರ ನೇತೃತ್ವದಲ್ಲಿ ನಗರದ ಪ್ರಮುಖ ಜೆಡಿಎಸ್ ಮುಖಂಡರು ಇತ್ತೀಚೆಗೆ ಬೆಂಗಳೂರಿನ ಅವರ ನಿವಾಸದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಹಲವು ಹೊತ್ತು ಚರ್ಚಿಸಿದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದ್ದರು.
ಸುಮಾರು ಒಂದೂವರೆ ಗಂಟೆ ಕಾಲ ತವರು ಜಿಲ್ಲೆಯ ಆಪ್ತರೊಂದಿಗೆ ಮಾತುಕತೆ ನಡೆಸಿದ ಗೌಡರು, ಪಕ್ಷದ ಯಾರೊಬ್ಬರೂ ಎದೆ ಗುಂದುವುದು ಬೇಡ. ಲೋಕಸಭಾ ಚುನಾವಣೆ ಫಲಿತಾಂಶ ನಂತರ ಜಿಲ್ಲೆಗೆ ಬರುತ್ತೇನೆ.ಎಲ್ಲಾ ಕಹಿ ಘಟನೆ ಮರೆತು ಪಕ್ಷ ಸಂಘಟನೆ ಮಾಡೋಣ ಎಂದು ಧೈರ್ಯ ಹೇಳಿ ಕಳಿಸಿದ್ದಾರೆ. ಇತ್ತೀಚಿನ ಕೆಲ ಬೆಳವಣಿಗೆ ಬಗ್ಗೆ ತೀವ್ರ ಬೇಸರ ಹೊರ ಹಾಕಿದ ಗೌಡರು, ಯಾರೊಬ್ಬರ ಬಗ್ಗೆಯೂ ಪ್ರಸ್ತಾಪ ಮಾಡಲಿಲ್ಲ ಎಂದು ಮುಖಂಡರು ತಿಳಿಸಿದರು.
ಈ ವೇಳೆ ಹೆಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ನಿರ್ದೇಶಕ ಬಿದರಕೆರೆ ಜಯರಾಂ, ಹಾಮೂಲ್ ನಿರ್ದೇಶಕ ಸ್ವಾಮಿಗೌಡ, ನಗರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಚಂದ್ರು ಮೊದಲಾದವರಿದ್ದರು.
ಗಡ್ಡಧಾರಿ ಗೌಡರು: ದೇವೇಗೌಡರು ವಯಸ್ಸು 90 ದಾಟಿದ್ದರೂ, ತುಂಬಾ ಶಿಸ್ತು ಮೈಗೂಡಿಸಿಕೊಂಡಿದ್ದಾರೆ. ಕಾರ್ಯಕ್ರಮಗಳಿಗೆ ಬರುವುದಿರಲಿ, ದೇವಸ್ಥಾನಗಳಿಗೆ ಹೋಗುವುದರಿಲಿ ಶೇವಿಂಗ್ ಮಾಡಿಕೊಂಡು, ಶುಭ್ರ ಬಿಳಿ ಬಣ್ಣದ ಉಡುಪು ಧರಿಸಿ ಹೋಗುವುದು ವಾಡಿಕೆ. ಆದರೆ ಇತ್ತೀಚಿನ ಕೆಲ ಘಟನೆಗಳಿಂದ ಅತಿಯಾಗಿ ನೊಂದುಕೊಂಡಿರುವ ಗೌಡರು, ಗಡ್ಡಧಾರಿಯಾಗಿದ್ದಾರೆ.ಏ.26
ರಂದು ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆಯಲ್ಲಿ ಮತದಾನ ಮಾಡಿ ಬೆಂಗಳೂರಿಗೆ ಹೋದವರು, ಆವತ್ತಿನಿಂದ ಮನೆಯಿಂದ ಹೊರಗೆ ಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net